ಸಚಿವ ಸ್ಥಾನದಿಂದ ಪಕ್ಷೇತರರನ್ನು ಕಿತ್ತೊಗೆಯುವ ದಿನ ದೂರವಿಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಶುಕ್ರವಾರ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ದೊಡ್ಡ ಸುಳ್ಳುಗಾರ ಎಂದು ಟೀಕಿಸಿದ್ದಾರೆ.
ರೈತರ ಮತಕ್ಕಾಗಿ ಪ್ರಣಾಳಿಕೆ ರೈತಪರ ಯೋಜನೆಗಳನ್ನು ಪ್ರಕಟಿಸಿದ ಬಿಜೆಪಿ, ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ರಸಗೊಬ್ಬರ, ಬಿತ್ತನೆ ಬೀಜ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ರೈತರನ್ನು ಕಾಡಿದೆ. ಇವೆಲ್ಲವುದಕ್ಕೂ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ತಿಂಗಳು ಕಳೆದರೂ ರೈತರಿಗೆ ಉಚಿತ ವಿದ್ಯುತ್ ನೀಡಿಲ್ಲ. ಬದಲಾಗಿ ಬಿಜೆಪಿ ನಾಯಕರು ಹೋಮ ಹವನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ದೂರಿದರು.
ಈ ನಡುವೆ ರಾಜ್ಯಗಳ ಸಮಸ್ಯೆ ಬಗ್ಗೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿರುವುದು ಹಾಸ್ಯಾಸ್ಪದವಾಗಿದೆ. ಇದೊಂದು ಕಟ್ಟುಕತೆ ಎಂದು ಅವರು ಟೀಕಿಸಿದ್ದಾರೆ. ಇದೇ ವೇಳೆ ಶಿಕಾರಿಪುರದಲ್ಲಿ ತಮ್ಮ ಸೋಲಿಗೆ ಬಿಜೆಪಿ ಹರಿಸಿದ ಹಣದ ಹೊಳೆಯೇ ಕಾರಣ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ.
|