ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಿರ್ಮಾಣವಾಗಿರುವ ಹೈಕೋರ್ಟ್ ಸಂಚಾರಿ ಪೀಠ ಶುಕ್ರವಾರ ಉದ್ಘಾಟನೆಗೊಂಡಿತು. ಈ ಮೂಲಕ ಉತ್ತರ ಕರ್ನಾಟಕದ ಜನತೆಯ ಬಹುದಿನದ ಆಶಯ ಕೊನೆಗೂ ಕೈಗೂಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹುಬ್ಬಳ್ಳಿ ಧಾರವಾಡದ ಹೈಕೋರ್ಟ್ ಸಂಚಾರಿ ಪೀಠವನ್ನು ಉದ್ಘಾಟಿಸಿದರು. ಈ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಕಾಂಗ್ರೆಸ್ ಹಿರಿಯ ಮುಖಂಡ ಧರಂಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಸಂಚಾರಿ ಪೀಠವನ್ನು ಖಾಯಂ ಪೀಠವನ್ನಾಗಿಸುವ ಆಶಯ ವ್ಯಕ್ತಪಡಿಸಿದರು. ಸಂಚಾರಿ ಪೀಠಕ್ಕೆ ಸರ್ಕಾರದಲ್ಲಿ 115 ಕೋಟಿ ರೂ. ಅನುದಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಘೊಷಣೆ ಮಾಡಿದರು.
ಏಕೀಕರಣದ ದಿನದಿಂದಲೂ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿರ್ಮಾಣವಾಗಿರುವ ಈ ಹೈಕೋರ್ಟ್ ಸಂಚಾರಿ ಪೀಠ ಇದೇ ತಿಂಗಳ 7ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
ಅವಳಿ ನಗರಗಳ ಸಂಭ್ರಮ ಬಹುನಿರೀಕ್ಷೆಯ ಹೈಕೋರ್ಟ್ ಸಂಚಾರಿ ಪೀಠಕ್ಕೆ ಉದ್ಘಾಟನೆಗೊಳ್ಳುತ್ತಿದ್ದಂತೆ ಅವಳಿ ನಗರಗಳಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತ್ತು. ಸಂಚಾರಿ ಪೀಠ ಸ್ಥಾಪನೆಗಾಗಿ ಕಳೆದ ಕೆಲವು ವರ್ಷಗಳಿಂದ ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಕೊನೆಗೂ ಕಂಡ ಕನಸು ನನಸಾಗಿರುವುದು ಜನರಲ್ಲಿ ಹರ್ಷದ ಭಾವನೆ ಮೂಡಿದೆ.
|