ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಅತುಲ್ ರಾವ್ ಅವರನ್ನು ಮಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಶುಕ್ರವಾರ ಉಡುಪಿಯ ಸಿಜೆಎಂ ನ್ಯಾಯಾಲಯ ವಿಚಾರಣೆ ವೇಳೆ ಈ ಆದೇಶ ಹೊರಡಿಸಿದೆ. ಭದ್ರತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಆರೋಪಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ಅಲ್ಲದೆ, ಆರೋಪಿ ಬಯಸಿದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸುವುದಕ್ಕೆ ನ್ಯಾಯಾಲಯದ ಅಡ್ಡಿಯಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಅತುಲ್ ಪತ್ನಿ ಮೀರಾ ರಾವ್ ಬುಧವಾರದಂದು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಪತಿಗೆ ಉಡುಪಿ ಜೈಲಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ಅಲ್ಲದೆ, ಅತುಲ್ ತಾಯಿ ಉಷಾ ರಾವ್ ಕೂಡ ತಮ್ಮ ಮಗನಿಗೆ ಉತ್ತಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಇತ್ತೀಚೆಗಷ್ಟೇ ಜೈಲಿನಲ್ಲಿ ಕೈದಿಗಳು ಆಹಾರದ ವಿಚಾರದಲ್ಲಿ ಅತುಲ್ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
|