ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಜಯಮಾಲ, ಕ್ರೌರ್ಯ, ಅಶ್ಲೀಲ ಹಾಗೂ ರಿಮೇಕ್ ಚಿತ್ರಗಳನ್ನು ಹೊರತುಪಡಿಸಿ ಉಳಿದ ಕನ್ನಡ ಚಿತ್ರಗಳಿಗೆ 10 ಲಕ್ಷ ರೂ. ಸಹಾಯಧನ ವಿತರಿಸಬೇಕು ಮತ್ತು ನಿರ್ಮಾಪಕರ ಹಿತದೃಷ್ಟಿಯಿಂದ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ವಿನಂತಿಸಿದರು.
ರಾಜ್ಯದಲ್ಲಿ ಚಿತ್ರಮಂದಿರಗಳೂ ಸಾಕಷ್ಟಿಲ್ಲ. ರಾಜ್ಯದಲ್ಲಿ ಜಾರಿಯಲ್ಲಿರುವ 1952ರ ಸಿನಿಮಾಟೋಗ್ರಫಿ ಕಾಯ್ದೆಯನ್ನು ಸರಳೀಕರಣಗೊಳಿಸಿ ಈ ಕಾಯ್ದೆಗೆ ತಿದ್ದುಪಡಿ ತರಬೇಕು. ಕೇರಳ ರಾಜ್ಯದಲ್ಲಿ ಈಗಾಗಲೇ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾಗಿದೆ. ಕರ್ನಾಟಕದಲ್ಲೂ ಆಕಾಡೆಮಿ ಸ್ಥಾಪಿಸಿದರೆ ಉದ್ಯಮದ ಅಭಿವೃದ್ದಿಗೆ ನೆರವಾಗುತ್ತದೆ ಎಂದರು. ಇದು ಅಂತಾರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿತ ವರ್ಷ. ಆದ್ದರಿಂದ ಮಹಿಳೆಯರ ಸಮಸ್ಯೆ ಕುರಿತ ಚಲನಚಿತ್ರಗಳಿಗೆ 25 ಲಕ್ಷ ಸಹಾಯಧನ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
|