ರಾಜ್ಯದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿ ಕೇಂದ್ರಕ್ಕೆ ತೆರಳಿದ್ದ ಸರ್ವಪಕ್ಷಗಳ ನಿಯೋಗಕ್ಕೆ ಬಹಿಷ್ಕಾರ ಹಾಕಿದ್ದ ಕಾಂಗ್ರೆಸ್ ಪಕ್ಷ, ಈಗ ಪ್ರತ್ಯೇಕ ನಿಯೋಗ ರಚಿಸಿ ಈ ತಿಂಗಳ 6 ಮತ್ತು 7ರಂದು ದೆಹಲಿಗೆ ತೆರಳಲಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು, ನಾಯಕರು ಹಾಗೂ ಪ್ರಮುಖ ಮುಖಂಡರು ದೆಹಲಿಗೆ ತೆರಳಿ ಪ್ರತ್ಯೇಕವಾಗಿ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನಿರ್ಧರಿಸಿದ್ದಾರೆ.
ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಅನೇಕ ಕೇಂದ್ರ ಸಚಿವರನ್ನು ಭೇಟಿ ಮಾಡಲಿರುವ ನಿಯೋಗವು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ರಸಗೊಬ್ಬರ ಸಮಸ್ಯೆ, ಕಳಸಾ ಬಂಡೂರಿ ಯೋಜನೆ- ಹೀಗೆ ಹತ್ತು ಹಲವು ವಿಚಾರಗಳನ್ನು ಕೇಂದ್ರದ ಗಮನಕ್ಕೆ ತರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಮೊದಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ದೆಹಲಿಗೆ ತೆರಳಿದ್ದ ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸದ ಜೆಡಿಎಸ್ ಕೂಡ ಪ್ರತ್ಯೇಕವಾಗಿ ನಿಯೋಗವೊಂದನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸಿತ್ತು. ಅದೇ ಹಾದಿಯನ್ನು ಹಿಡಿದಿದ್ದ ಕಾಂಗ್ರೆಸ್ ಈಗ ದೆಹಲಿಗೆ ತೆರಳಲು ನಿರ್ಧರಿಸಿದೆ.
|