ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ಮುಖಂಡ, ಪ್ರಭಾವೀ ನಾಯಕ ಪಿ.ಜಿ.ಆರ್. ಸಿಂಧ್ಯಾ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿವೆ.
ಉನ್ನತ ಮೂಲಗಳ ಪ್ರಕಾರ, ಸಿಂಧ್ಯಾ ಬಿಜೆಪಿಯತ್ತ ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ. ಹಲವಾರು ಘಟಾನುಘಟಿಗಳನ್ನು ತಮ್ಮತ್ತ ಸೆಳೆದುಕೊಂಡಿರುವ ಕಮಲಕ್ಕೆ ಮತ್ತೊಂದು ದಳ ಸದ್ಯದಲ್ಲಿಯೇ ಸೇರಲಿದೆ ಎನ್ನುವುದು ಬಿಜೆಪಿ ನಾಯಕರ ಒಳಗಿನ ಮಾತು.
ಈಗಾಗಲೇ ಬಿಜೆಪಿಯ ಹಿರಿಯ ನಾಯಕರು ಸಿಂಧ್ಯಾ ಅವರನ್ನು ಭೇಟಿ ಮಾಡಿ ಸಂಪರ್ಕಿಸಿದಾಗ ಸಿಂಧ್ಯಾ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಹಿಂದುಳಿದ ವರ್ಗದ ನಾಯಕರ ಪಡೆಯನ್ನು ಗಟ್ಟಿಗೊಳಿಸಲು ಬಿಜೆಪಿ ಸನ್ನದ್ಧವಾಗಿದೆ. ಅಲ್ಲದೆ, ಮುಂಬೈ-ಕರ್ನಾಟಕ ಭಾಗದಲ್ಲಿನ ಮರಾಠ ಮತಬ್ಯಾಂಕ್ ಮೇಲೆ ಪ್ರಭಾವ ಬೀರಬಹುದೆಂಬುದು ಬಿಜೆಪಿ ಲೆಕ್ಕಚಾರ.
ಈ ನಡುವೆ, ಕಾಂಗ್ರೆಸ್ ನಾಯಕರು ಸಿಂಧ್ಯಾ ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರಾದರೂ, ಸಿಂಧ್ಯಾ ಅವರು ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ. ಪ್ರಭಾವಿ ನಾಯಕ ಸಿದ್ದರಾಮಯ್ಯನವರನ್ನೇ ಕಾಂಗ್ರೆಸ್ ಕಡೆಗೆಣಿಸಿದೆ ಎಂಬುದು ಸಿಂಧ್ಯಾ ಅಂಬೋಣ. ಬಿಜೆಪಿ ಈಗಾಗಲೇ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವುದರಿಂದ ಸಿಂಧ್ಯಾ ಅವರನ್ನು ಕನಕಪುರ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದ್ದು, ಒಂದು ವಾರದೊಳಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.
|