ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಮಾಜವಾದಿ ಪಕ್ಷ ನೀಡಿರುವ ಬೆಂಬಲ ಅಸಹಜವಾಗಿದ್ದು, ಯಾವುದೇ ಸಂದರ್ಭದಲ್ಲಿ ಸರ್ಕಾರ ಉರುಳಿ ಬೀಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಡುವೈರಿಯಾಗಿದ್ದ ಕಾಂಗ್ರೆಸ್ ಜೊತೆ ಸಮಾಜವಾದಿ ಪಕ್ಷ ಏಕಾಏಕಿ ಸೇರಿಕೊಂಡು ಬೆಂಬಲ ಸೂಚಿಸಿರುವುದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಈ ದಿಢೀರ್ ಬೆಳವಣಿಗೆಯಿಂದ ಸರ್ಕಾರದ ಅಸ್ಥಿರತೆ ಬಗ್ಗೆ ಅನುಮಾನ ಕಂಡುಬಂದಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಶೀಘ್ರವೇ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಅವರು ಒತ್ತಾಯಿಸಿದರು.
ಎಸ್ಪಿ ಜೊತೆಗಿನ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಾದರೂ ಪತನಗೊಳ್ಳಬಹುದು. ಈ ನಿಟ್ಟಿನಲ್ಲಿ ಶೀಘ್ರವೇ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ಅವರು ನೀಡಿದರು.
|