ರಸಗೊಬ್ಬರ ಕೊರತೆ ಗೊಂದಲ ನಿವಾರಣೆ ಸೇರಿದಂತೆ ರಾಜ್ಯದ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಮಂತ್ರಿಗಳ ಭೇಟಿಗೆ ತೆರಳಿರುವ ಕಾಂಗ್ರೆಸ್ ನಿಯೋಗದ ಜೊತೆ ತೆರಳಲು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದು, ಅನೇಕ ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.
ದೆಹಲಿಗೆ ನಿಯೋಗ ತೆರಳುವ ಕುರಿತು ಸ್ವತಃ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ದೂರವಾಣಿ ಮೂಲಕ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದರೂ ಮೈಸೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿದೆ ಎಂಬ ನೆಪ ಹೇಳಿ ನಿಯೋಗದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯನವರಿಗೆ ಪಕ್ಷದ ಬಗ್ಗೆ ಅಸಮಾಧಾನ ಹೊಗೆ ಕಂಡು ಬಂದಿದ್ದು, ಈಗ ನಿಯೋಗದ ಜೊತೆಗೂ ತೆರಳದೆ ಕಾರಣ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ಈ ವಿವಾದಗಳಿಗೆ ತೆರೆ ಎಳೆದಿರುವ ಖರ್ಗೆ, ಸಿದ್ದರಾಮಯ್ಯ ಪಕ್ಷ ತೊರೆದು ಹೋಗುವುದಿಲ್ಲ. ಯಾವುದೋ ಕಾರ್ಯಕ್ರಮವಿರುವುದರಿಂದ ನಿಯೋಗದ ಜೊತೆ ಬರಲಾಗಿಲ್ಲ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಹಾಗಿಲ್ಲ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ನೇತೃತ್ವದ 20 ಸದಸ್ಯರ ತಂಡ ದೆಹಲಿಗೆ ತೆರಳಿದ್ದು, ಇಂದು(ಭಾನುವಾರ) ಪ್ರಧಾನಿ ಮನಮೋಹನ್ ಸಿಂಗ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಅಲ್ಲದೆ, ಗೃಹ ಸಚಿವ ಶಿವರಾಜ್ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ನಿಯೋಗ ಭೇಟಿ ಮಾಡಲಿದೆ.
|