ರಾಜ್ಯ ರಾಜಕೀಯದಲ್ಲಾಗಿರುವ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ಮಾಜಿ ಉಪಮುಖ್ಯಮಂತ್ರಿ ತಮ್ಮ ಬೆಂಬಲಿಗರು ಹಾಗೂ ನಿಷ್ಠ ಶಾಸಕರ ಜೊತೆಯಲ್ಲಿ ಸಭೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹುಟ್ಟಿರುವಾಗಲೇ ಈ ಸಭೆ ಕರೆದಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿದ ಸಂದರ್ಭದಲ್ಲಿ ನಿಯೋಗದ ಜೊತೆ ಸಿದ್ದರಾಮಯ್ಯ ಭಾಗವಹಿಸದಿರುವುದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ನಡುವೆ ರಾಜ್ಯದಲ್ಲಿ ಆಗಿರುವ ದಿಡೀರ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯದಲ್ಲಿ ಪಕ್ಷಾಂತರಗೊಳ್ಳುವುದು ಸಾಮಾನ್ಯ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನೀಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಸಧ್ಯಕ್ಕಂತೂ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲ, ಕೆಪಿಸಿಸಿ ನಿಯೋಗದ ಜೊತೆ ದೆಹಲಿಗೆ ಹೋಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಹಿರಿಯ ಶಾಸಕರು ದೆಹಲಿಗೆ ತೆರಳಿದ್ದಾರೆ. ಈ ನಿಯೋಗದ ಜೊತೆ ತಾನು ಹೋಗುವ ಅಗತ್ಯವಿರಲಿಲ್ಲ. ಅಲ್ಲದೆ, ಮೊದಲೇ ಆಯೋಜಿಸಿದ್ದ ಕಾರ್ಯಕ್ರಮ ಬಿಡುವ ಹಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ವಿಧಾನಸಭಾ ಕಾರ್ಯಕಲಾಪಗಳಿಗೂ ಸಿದ್ದರಾಮಯ್ಯ ಸರಿಯಾಗಿ ಹಾಜರಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
|