ಪ್ರತಿಪಕ್ಷದ ಶಾಸಕರನ್ನು ಸೆಳೆದು ಸರಕಾರ ಸುಭದ್ರಗೊಳಿಸಲು ಕಾರ್ಯಾಚರಣೆ ನಡೆಸಿದ ಬಳಿಕ ಬಿಜೆಪಿ ಸರಕಾರ ಇದೀಗ ಸಚಿವ ಸಂಪುಟ ವಿಸ್ತರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇದೇ ಗುರುವಾರದಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಚಿವ ಸಂಪುಟ ವಿಸ್ತರಣೆ ಮಾಡಲಿದೆ.
ಮೊದಲು ಪಕ್ಷಕ್ಕೆ ಸೇರ್ಪಡೆಗೊಂಡ ಮೂವರು ಮಾಜಿ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲು ಪಕ್ಷ ತೀರ್ಮಾನಿಸಿದೆ. ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ ಅವರಿಗೆ ಮಂತ್ರಿಗಳಾಗುವ ನಿರೀಕ್ಷೆ ಇದೆ.
ಅಂತೆಯೇ ತಡವಾಗಿ ಬಿಜೆಪಿ ಸೇರಿದ ಆರ್.ಎಲ್. ಜಾಲಪ್ಪ ಪುತ್ರ ದೊಡ್ಡಬಳ್ಳಾಪುರದ ಕಾಂಗ್ರೆಸ್‌ನ ಶಾಸಕ ಜೆ. ನರಸಿಂಹಸ್ವಾಮಿ ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ. ಈ ನಡುವೆ ಇನ್ನಿಬ್ಬರು ಪ್ರತಿಪಕ್ಷದ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ಜೆಡಿಎಸ್‌ನ ಉಮೇಶ್ ಕತ್ತಿ ಅವರ ಜೊತೆ ಮಾತುಕತೆ ನಡೆಸಿದೆ. ಉಮೇಶ್ ಕತ್ತಿ ಬಿಜೆಪಿ ಸೇರುವ ನಿರೀಕ್ಷೆ ದಟ್ಟವಾಗಿದ್ದು, ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಅನೇಕ ಶಾಸಕರು ಬಿಜೆಪಿ ಸೇರುವ ಉತ್ಸಾಹ ತೋರಿದ್ದು, ಶೀಘ್ರವೇ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
|