ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆ ಗುರುವಾರ ನಡೆಯಲಿರುವುದು ಬಹುತೇಕ ಖಚಿತವಾಗಿದ್ದು, ಇದೀಗ ಮತ್ತಿಬ್ಬರು ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ.
ನಟ ಹಾಗೂ ತುರುವೇಕೆರೆ ಶಾಸಕ ಜಗ್ಗೇಶ್ ಈಗ ಬಿಜೆಪಿಗೆ ಸೇರುವ ತೀರ್ಮಾನ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರದಂದು ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜಗ್ಗೇಶ್, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಜೆಡಿಎಸ್‌ನ ಶಾಸಕ ಉಮೇಶ್ ಕತ್ತಿ ಕೂಡ ಬಿಜೆಪಿ ಸೇರುವ ಬಗ್ಗೆ ಒಲವು ತೋರಿದ್ದು, ಸಚಿವ ಸ್ಥಾನ ನೀಡಿದರೆ ಮಾತ್ರ ಪಕ್ಷ ಸೇರುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಸಚಿವ ಸ್ಥಾನದ ಆಯ್ಕೆ ಕುರಿತು ಬಿಜೆಪಿ ನಾಯಕರಿಗೆ ತೀವ್ರ ಗೊಂದಲವುಂಟಾಗಿದೆ. ಬಾಲಚಂದ್ರ ಜಾರಕಿಹೊಳಿ, ಅಸ್ನೋಟಿಕರ್ ಮತ್ತು ಶಿವನಗೌಡ ಅವರನ್ನು ಪಕ್ಷಕ್ಕೆ ಕರೆತರುವ ಮುನ್ನ ಸಚಿವರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಈ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ಉಮೇಶ್ ಕತ್ತಿಗೆ ಸ್ಥಾನ ನೀಡಿದರೆ ಅಸ್ನೋಟಿಕರ್ ಅಥವಾ ಶಿವಗೌಡರಲ್ಲಿ ಒಬ್ಬರಿಗೆ ಸಚಿವ ಸ್ಥಾನ ತಪ್ಪುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಬಿಜೆಪಿ ಸಚಿವ ಸ್ಥಾನದ ಆಯ್ಕೆಯಲ್ಲಿ ತೀವ್ರ ಗೊಂದಲ ಉಂಟಾಗಿದೆ.
|