ಒಂದು ಕಡೆ ಕಾಂಗ್ರೆಸ್ ನೇತೃತ್ವದ ಯುಪಿಎ, ಸರಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಇತ್ತ ಬಿಜೆಪಿ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರುವ ದೃಷ್ಟಿಯಿಂದ ಪ್ರತಿಪಕ್ಷದ ಶಾಸಕರನ್ನು ತನ್ನತ್ತ ಸೆಳೆಯುತ್ತಿದೆ.
ಈಗ ಮತ್ತೆ ಮೂವರು ಶಾಸಕರು ಬಿಜೆಪಿ ಸೇರುವ ತಯಾರಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಪಿರಿಯಾಪಟ್ಟಣದ ಶಾಸಕ ಕೆ. ವೆಂಕಟೇಶ್ ಹಾಗೂ ಕಡೂರು ಶಾಸಕ ಕೃಷ್ಣಮೂರ್ತಿ ಬಿಜೆಪಿ ನಾಯಕರ ಜೊತೆ ಗುಪ್ತ ಸ್ಥಳದಲ್ಲಿ ಮಾತುಕತೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂವರು ಶಾಸಕರು ಬಿಜೆಪಿ ಸೇರಲು ಉತ್ಸುಹಕರಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂವರು ಶಾಸಕರು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರಾಗಿದ್ದು, ಬಿಜೆಪಿ ಸೇರುವ ಒಲವು ತೋರಿರುವುದು ಅನೇಕ ಉಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಇದೇ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಪಕ್ಷದ ನಾಯಕರು ಈಗಾಗಲೇ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡಿರುವ ಶಾಸಕರ ಬಗ್ಗೆ ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ. ಈಗಾಗಲೇ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಈಗ ಮತ್ತೆ ಮೂವರು ಬಿಜೆಪಿ ಸೇರ್ಪಡೆಗೊಳ್ಳಲಿರುವುದು ಪಕ್ಷದ ಹಿರಿಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
|