ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಸೋಲನ್ನು ಅನುಭವಿಸಿದ ಬಳಿಕ ನಟ, ಸಂಸದ ಅಂಬರೀಷ್ ಮುಂಬರುವ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈಗಾಗಲೇ ಮೂರು ಬಾರಿ ಸಂಸದನಾಗಿ ಕಾರ್ಯ ನಿರ್ವಹಿಸಿ ಸಮಾಜ ಸೇವೆ ಮಾಡಿದ್ದಾಗಿದೆ. ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಮುಂದಿನ ಉಪಚುನಾವಣೆಯಲ್ಲಿ ಶಾಸಕರಿಗೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದ ಬಳಿಕ ಅಂಬರೀಷ್, ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಗೆಲ್ಲುವ ವಿಶ್ವಾಸವನ್ನಿಟ್ಟಿದ್ದರು. ಆದರೆ ಅವರ ಬಯಕೆಗೆ ಜನತೆ ತಣ್ಣೀರೆಚಿದ್ದಾರೆ. ಈ ನಿಟ್ಟಿನಲ್ಲಿ ತೀವ್ರ ನೊಂದುಕೊಂಡಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಅಲ್ಲದೆ, ಚಿತ್ರರಂಗದತ್ತ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ರಾಜಕೀಯದಿಂದ ದೂರ ಸರಿಯುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
|