ಬಜೆಟ್ ಪೂರ್ವಭಾವಿ ಚರ್ಚೆಯ ಸಂದರ್ಭದಲ್ಲಿ ಹೋಟೆಲು ಉದ್ಯಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿರುವುದನ್ನು ಬೆಂಗಳೂರು ಹೋಟೆಲುಗಳ ಸಂಘ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸಂಘದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ಬಹಿರಂಗ ಪತ್ರವನ್ನು ಬರೆದಿದ್ದು, ಪತ್ರದ ಸಾರಾಂಶವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
"ಹೋಟೆಲ್ ಉದ್ಯಮ ಸಂಘಟನೆಯ ಪ್ರತಿನಿಧಿಗಳಿಗೆ ಅಹವಾಲನ್ನು ವಿವರಿಸಲು ಅವಕಾಶ ನೀಡದೇ ಇದ್ದುದು ದುರದೃಷ್ಟಕರ. ಹೊಟೇಲು ಸಂಘವೆಂದರೆ ಪಂಚತಾರಾ ಹೊಟೇಲುಗಳ ಸಂಘಟನೆ ಎಂಬ ಭಾವನೆ ಅಧಿಕಾರಿಗಳದ್ದು. ಹೊಟೇಲು ಉದ್ಯಮದಲ್ಲಿ ಸಮಸ್ಯೆಗಳೇ ಇರುವುದಿಲ್ಲ ಎಂಬ ಅಭಿಪ್ರಾಯ ಅಧಿಕಾರ ವರ್ಗ ಮತ್ತು ಸಾರ್ವಜನಿಕರಲ್ಲಿ ಮೂಡಿರುವುದು ವಿಷಾದನೀಯ" ಎಂದು ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಹೋಟೆಲ್ ಉದ್ಯಮಿಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ ಎಂಬ ತಪ್ಪು ಭಾವನೆ ಮುಖ್ಯಮಂತ್ರಿಗಳಿಗಿದೆ. 10x10ಅಡಿ ಸ್ಥಳದಲ್ಲಿ ಕಾಫಿ ಶಾಪ್ ನಡೆಸುವ ಸಣ್ಣ ಉದ್ಯಮಿಗಳಿಂದ ಮೊದಲ್ಗೊಂಡು, ದರ್ಶಿನಿ, ಉಪಹಾರಗೃಹ ಮತ್ತು ಮಧ್ಯಮದರ್ಜೆಯ ಹೊಟೇಲು ಹಾಗೂ ವಸತಿಗೃಹಗಳನ್ನು ನಡೆಸುವ ಉದ್ಯಮಿಗಳು ಈ ಕ್ಷೇತ್ರದಲ್ಲಿದ್ದು, ಅನೇಕ ಸಮಸ್ಯೆ-ಸವಾಲುಗಳ ನಡುವೆ ಹರಸಾಹಸ ನಡೆಸಿ ಹೊಟೇಲು ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ ಎಂದವರು ತಮ್ಮ ಸುದೀರ್ಘ ಪತ್ರದಲ್ಲಿ ಉದ್ಯಮದ ಸಮಸ್ಯೆಗಳನ್ನು ವಿವರಿಸಿದ್ದಾರೆ.
ಉದ್ಯೋಗ ಸೃಷ್ಟಿ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಹೊಟೇಲು ಉದ್ಯಮವು ಒಂದು ವಿಸ್ತಾರವಾದ ಕ್ಷೇತ್ರವಾಗಿದ್ದು, ಸರಕಾರವಾಗಲಿ ಅಥವಾ ಬೇರಾವುದೇ ಇಲಾಖೆಗಳಾಗಲೀ, ಸಂಸ್ಥೆಗಳಾಗಲೀ ನೀಡಲು ಸಾಧ್ಯವಾದಷ್ಟು ಅಗಾಧ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದೆ. ಯಾವುದೇ ಶಿಕ್ಷಣ-ತರಬೇತಿ ಇಲ್ಲದೆ, ಮನೆಯ ಕಷ್ಟ-ತಾಪತ್ರಯಗಳಿಂದ ಸೋತು ಸುಣ್ಣವಾಗಿ ಕೆಲಸ ಹುಡುಕುತ್ತಾ ಬರುವ ಅನೇಕ ಮಂದಿಗೆ ಹೊಟೇಲು ಉದ್ಯಮ ತಕ್ಷಣ ಆಶ್ರಯ ನೀಡುತ್ತದೆ ಎಂದವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
|