ಕರ್ನಾಟಕ ರಾಜ್ಯ ಸರಕಾರದ ಮೂರನೇ ಸಚಿವ ಸಂಪುಟ ವಿಸ್ತರಣೆ ಗುರುವಾರ ರಾಜಭವನದಲ್ಲಿ ನಡೆಯಲಿದೆ. ವಿಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರಗೊಂಡ ಮಾಜಿ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಣೆ ಹಾಕಿರುವುದು ಬಿಜೆಪಿ ವಲಯದಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ.
ಗುರುವಾರ ಸಂಜೆ ನಾಲ್ಕು ಗಂಟೆಗೆ ರಾಜಭವನದಲ್ಲಿ ಸಂಪುಟ ವಿಸ್ತರಣೆ ಸಮಾರಂಭ ನಡೆಯಲಿದೆ. ಜನತಾದಳ(ಎಸ್)ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್ ಮಾಜಿ ಶಾಸಕರಾದ ಆನಂದ್ ಆಸ್ನೋಟಿಕರ್ ಹಾಗೂ ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ದೊರಕುವುದು ಖಚಿತವಾಗಿದೆ.
ಈ ನಡುವೆ ತಾವು ಪಕ್ಷಕ್ಕೆ ಕರೆತಂದಿರುವ ಮೂವರಿಗೂ ಸಚಿವ ಸ್ಥಾನ ನೀಡಲೇ ಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಟ್ಟು ಹಿಡಿದಿದ್ದಾರೆ. ಅದೇ ವೇಳೆ ಜೆಡಿಎಸ್‌ನ ಉಮೇಶ್ ಕತ್ತಿ ಪಕ್ಷ ಸೇರಲು ಎರಡು ವಾರಗಳ ಸಮಯ ಕೇಳಿದ್ದಾರೆ. ಕತ್ತಿಯವರು ಪಕ್ಷ ಸೇರಿದರೆ ಬಿಜೆಪಿಯ ಸಚಿವರೊಬ್ಬರು ರಾಜೀನಾಮೆ ನೀಡುವ ಮೂಲಕ ಇವರಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗುತ್ತಿದೆ.
ಅಂತೂ ಒಟ್ಟಿನಲ್ಲಿ ಗಣಿ ಧಣಿಗಳ ಮೂಲಕ ವಿರೋಧ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆದು ಸರಕಾರವನ್ನು ಭದ್ರಗೊಳಿಸುವ ಮುಖ್ಯಮಂತ್ರಿ ಯಡಿಯೂರಪ್ಪರ ನಿಲುವು ಬಿಜೆಪಿಯಲ್ಲಿ ಅಸಮಾಧಾನದ ಗಾಳಿ ಬೀಸಲು ಕಾರಣವಾಗಿದೆ.
|