ಮಾಜಿ ಸಚಿವ ಎಚ್.ಕೆ. ಪಾಟೀಲ್ ಕನಸು ಮತ್ತೆ ಚಿಗುರಿದೆ. ಎರಡು ಬಾರಿ ಚುನಾವಣೆಯಲ್ಲಿ ಸೋಲುಂಡ ಬಳಿಕ ಈಗ ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಕುರಿತು ಚಿಂತನೆ ನಡೆಸಿದ್ದಾರೆ.
ಕಾರವಾರ ಮತಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ಮರು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದ ಎಚ್.ಕೆ. ಪಾಟೀಲ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಕಾರವಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಬಲವಿರುವುದರಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದ್ದು ಪಾಟೀಲ್ ಹೆಸರು ಕೇಳಿ ಬರುತ್ತಿದೆ. ಗದಗ ವಿಧಾನಸಭಾ ಕ್ಷೇತ್ರ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿರುವ ಎಚ್.ಕೆ. ಪಾಟೀಲರು ರಾಜಕೀಯ ಸ್ಥಾನ ಉಳಿಸಿಕೊಳ್ಳಲು ಕಾರವಾರ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲು ಜೆಡಿಎಸ್ ಕೂಡ ಮುಂದಾಗಿದೆ. ಉತ್ತರಕರ್ನಾಟಕ ಹಾಗೂ ಕಾರವಾರಗಳಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆನಂದ್ ಅಸ್ನೋಟಿಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪಾಟೀಲ್‌ಗೆ ಸಹಾಯಕವಾಗಬಹುದು ಎನ್ನಲಾಗಿದೆ. ಎರಡು ಬಾರಿ ವಿಧಾನಸೌಧ ಪ್ರವೇಶಿಸಲು ಬಿಡದ ಮತದಾರ ಈ ಬಾರಿ ಪಾಟೀಲ್ ಅವರ ಕನಸನ್ನು ನನಸು ಮಾಡಲಿದ್ದಾರೆಯೇ ಕಾದುನೋಡಬೇಕಿದೆ.
|