ಮೂವರು ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ನೇತತ್ವದ ಬಿಜೆಪಿ ಸರಕಾರದ ಸಂಪುಟದ ಸದಸ್ಯರ ಸಂಖ್ಯೆ 34ಕ್ಕೇರಿದ್ದು, ಎಲ್ಲಾ ಸ್ಥಾನಗಳು ಭರ್ತಿಯಾದಂತಾಗಿದೆ.
ಪೂರ್ಣ ಪ್ರಮಾಣದ ಸಚಿವ ಸಂಪುಟ ನೇಮಕಗೊಂಡ ಹಿನ್ನೆಲೆಯಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡುವ ಪ್ರಮೇಯವೇ ಇಲ್ಲದಿರುವುದರಿಂದ ಈಗ ಖಾತೆಗಳ ಮರು ಹಂಚಿಕೆ ಆಗುವ ಸಂಭವವಿದೆ. ಈ ನಿಟ್ಟಿನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಕೆಲವರಿಗೆ ಕತ್ತರಿ ಬೀಳಲಿದ್ದು, ಮತ್ತೆ ಕೆಲವರಿಗೆ ಖಾತೆ ಬದಲಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಅಲ್ಲದೆ, ಮುಖ್ಯಮಂತ್ರಿ ನಾಲ್ಕೈದು ಖಾತೆಗಳನ್ನು ಇಟ್ಟುಕೊಂಡಿದ್ದು, ಅವುಗಳಲ್ಲಿ ಕೆಲ ಖಾತೆಗಳನ್ನು ಹಂಚುವ ಸಾಧ್ಯತೆಗಳಿವೆ. ಯಡಿಯೂರಪ್ಪನವರ ಬಳಿ ಗಣಿ, ಭೂ ವಿಜ್ಞಾನ, ಅರಣ್ಯ, ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ, ಬೆಂಗಳೂರು ಅಭಿವೃದ್ದಿಯಂತಹ ಪ್ರಮುಖ ಖಾತೆಗಳಿವೆ. ಅವುಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಹೊರತು ಪಡಿಸಿ ಉಳಿದ ಖಾತೆಗಳನ್ನು ಹಂಚುವ ನಿರೀಕ್ಷೆ ಇದೆ.
ಈ ತಿಂಗಳ 17ರಂದು ಬಜೆಟ್ ಅಧಿವೇಶನ ಪ್ರಾರಂಭಗೊಳ್ಳಲಿರುವುದರಿಂದ ಅದಕ್ಕೂ ಮೊದಲು ಖಾತೆಗಳನ್ನು ಹಂಚುವ ಕುರಿತು ಸರಕಾರ ಚಿಂತನೆ ನಡೆಸಿದೆ.
|