ರಾಜ್ಯ ಸರಕಾರ 41 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದೆ.
ಗುಪ್ತದಳದ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರನ್ನು ಬೆಂಗಳೂರಿನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದು, ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರಿಗೆ ಬೆಂಗಳೂರಿನ ಪೊಲೀಸ್ ಆಯುಕ್ತ ಎನ್. ಅಚ್ಯುತ ರಾವ್ ಅಧಿಕಾರ ಹಸ್ತಾಂತರಿಸಲಿದ್ದಾರೆ. ಹೊಸದಾಗಿ ರಚನೆಯಾಗಿರುವ ಆಂತರಿಕ ಭದ್ರತೆಯ ಎಡಿಜಿಪಿಯಾಗಿ ಅಚ್ಯುತರಾವ್ ಅವರು ನೇಮಕಗೊಳ್ಳಲಿದ್ದಾರೆ.
ಅಲ್ಲದೆ, ಶಂಕರ ಬಿದರಿ ಸ್ಥಾನಕ್ಕೆ ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ವರ್ಗಾವಣೆ ಮಾಡಲು ಸರಕಾರ ಆದೇಶ ಹೊರಡಿಸಿದೆ. ಅಂತೆಯೇ ಮೈಸೂರು ಆಯುಕ್ತರಾಗಿ ಡಾ. ಎಸ್. ಪರಶಿವಮೂರ್ತಿ ಹಾಗೂ ಹುಬ್ಬಳ್ಳಿ ಆಯುಕ್ತರನ್ನಾಗಿ ಎನ್. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಉಳಿದಂತೆ ಧರ್ಮಪಾಲ್ ನೇಗಿ ಅವರನ್ನು ಬೆಂಗಳೂರು ಬಂದಿಖಾನೆ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಡಾ.ಬಿ.ಇ. ಉಮಾಪತಿ ಅವರು ಬೆಂಗಳೂರು ಆಡಳಿತದ ಎಡಿಜಿಪಿ ವರ್ಗಾವಣೆಗೊಂಡ ಪ್ರಮುಖರು.
|