ಪ್ರಾರ್ಥನ ಮಂದಿರ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸಿ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಭಾನುವಾರದವರೆಗೆ ವಿಸ್ತರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತಿಯಿಂದ ಕೂಡಿದೆ.
ದುಷ್ಕರ್ಮಿಗಳು ಪ್ರಾರ್ಥನ ಮಂದಿರಗಳ ಬಳಿ ಪ್ರಾಣಿಯೊಂದರ ತಲೆ ಕತ್ತರಿಸಿ ಎಸೆದಿರುವ ಘಟನೆಯಿಂದ ರೊಚ್ಚಿಗೆದ್ದ ಒಂದು ಕೋಮಿನ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ. ಇದರಿಂದ ಮೂರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿ ವಹಿವಾಟುಗಳನ್ನು ಬಂದ್ ಮಾಡಲಾಗಿದೆ. ಈ ಘಟನೆಯಲ್ಲಿ ಅಮಾಯಕರು ಪೊಲೀಸರ ಲಾಠಿ ಚಾರ್ಜ್‌ನಿಂದಾಗಿ ಪೆಟ್ಟು ತಿನ್ನಬೇಕಾಯಿತು.
ಒಂದು ಹಂತದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತೆನ್ನುತ್ತಿರುವಂತೆ, ಮತ್ತೆ ಭುಗಿಲೆದ್ದಿದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯವಾಗಿ ಈ ಕೃತ್ಯ ಎಸೆಯಲಾಗಿದೆ ಎಂಬ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪ್ರತಿಭಟನೆ ದುಷ್ಕರ್ಮಿಗಳು ಪ್ರಾರ್ಥನ ಮಂದಿರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ರೋಷನ್ ಬೇಗ್ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವಲ್ಲಿ ಸ್ವಲ್ಪ ಮಟ್ಟಿಗೆ ಸಫಲರಾದರು.
ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆಯಿಂದ ಪರಿಸ್ಥಿತಿಯನ್ನು ಶಾಂತಗೊಂಡಿತು. ಆದರೆ ಈ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಮಾತಿನಿಂದ ಸಮಾಧಾನಗೊಳ್ಳದ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದರು.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
|