ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರಲ್ಲಿ ವಿಶೇಷ ಅರ್ಚನೆ ಮಾಡಬೇಕೆಂದು ಸುತ್ತೋಲೆ ಹೊರಡಿಸಿ ವಿವಾದಕ್ಕೆ ಕಾರಣವಾಗಿದ್ದ ಮುಜರಾಯಿ ಇಲಾಖೆ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತದೇ ರಾಗ ಹಾಡಿದ್ದಾರೆ.
ನಗರದ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಯಡಿಯೂರಪ್ಪ ಹೆಸರಲ್ಲಿ ವಿಶೇಷ ಅರ್ಚನೆ ಮಾಡಬೇಕೆಂದು ಅಲ್ಲಿನ ಅರ್ಚಕರಿಗೆ ತಾಕೀತು ಮಾಡಿದ್ದು, ಇದು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರನ್ನು ಚಕಿತಗೊಳಿಸಿತೆನ್ನಲಾಗಿದೆ.
ಈ ಬಗ್ಗೆ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆಯಲ್ಲ ಎಂಬ ಅರ್ಚಕರ ಪ್ರಶ್ನೆಗೆ, ಸುತ್ತೋಲೆ ಇಲ್ಲದಿದ್ದರೇನು? ಪ್ರತಿನಿತ್ಯ ಯಡಿಯೂರಪ್ಪ ಅವರ ಹೆಸರಲ್ಲಿ ಅರ್ಚನೆ ಮಾಡಿ. ಸಚಿವರ ಆದೇಶ ಕಟ್ಟುನಿಟ್ಟಗಿ ಪಾಲಿಸಬೇಕು ಎಂದು ಎಲ್ಲಾ ದೇವಸ್ಥಾನಗಳಿಗೆ ಭೇಟಿ ಮಾಡಿ ಸೂಚನೆ ನೀಡುತ್ತಿದ್ದಾರೆಂಬ ವದಂತಿಗಳು ಹಬ್ಬಿವೆ.
ಕೃಷ್ಣಯ್ಯ ಶೆಟ್ಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಎಲ್ಲಾ ದೇವಸ್ಥಾನಗಳಿಗೆ ಮುಖ್ಯಮಂತ್ರಿ ಹೆಸರಲ್ಲಿ ಅರ್ಚನೆ ಮಾಡಿಸಬೇಕೆಂದು ಸುತ್ತೋಲೆ ಹೊರಡಿಸಿದ್ದರು. ಆದರೆ ಮುಖ್ಯಮಂತ್ರಿಯವರೇ ಇದನ್ನು ರದ್ದು ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
|