ರಾಜ್ಯದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಒಪ್ಪಿದರೆ ಮಾತ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿಮಾಡಿ ಮಾತುಕತೆ ನಡೆಸಿದ ಅವರು ಒಮ್ಮತದ ಅಭ್ಯರ್ಥಿ ಬಗ್ಗೆ ಮೊದಲು ತೀರ್ಮಾನಕ್ಕೆ ಬರುವಂತೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರಕ್ಕೆ ವಿಶ್ವಾಸಮತ ಯಾಚಿಸಲು ಇನ್ನು ಹತ್ತು ದಿನಗಳ ಕಾಲಾವಕಾಶವಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ಜಾತ್ಯತೀತ ಪಕ್ಷಗಳು ಒಂದುಗೂಡಬೇಕು ಎಂಬ ಸಂದೇಶವನ್ನು ಜನತೆಗೆ ತುರ್ತಾಗಿ ನೀಡಬೇಕಿದೆ. ಆದ್ದರಿಂದ ಮೊದಲು ಕಾಂಗ್ರೆಸ್ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಈ ಒಪ್ಪಂದಕ್ಕೆ ಕಾಂಗ್ರೆಸ್ ಒಪ್ಪದಿದ್ದರೆ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ರಾಜ್ಯ ರಾಜಕೀಯದ ವಿಚಾರದಲ್ಲಿ ಕಾಂಗ್ರೆಸ್ ಕೈಗೊಳ್ಳುವ ತೀರ್ಮಾನದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
|