ಹೊಸ ಪಕ್ಷಕಟ್ಟಲು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿರುವ ಬೆನ್ನಲ್ಲೆ ತನ್ನ ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಕಸರತ್ತು ಮುಂದುವರೆಸಿದೆ.
ಪ್ರಸ್ತುತ ಮಾರಿಷಸ್ ಪ್ರವಾಸದಲ್ಲಿರುವ ಸಿದ್ದರಾಮಯ್ಯನವನ್ನು ಭೇಟಿ ಮಾಡಲು ಬಿಜೆಪಿ ಮುಖಂಡರು ತೀರ್ಮಾನಿಸಿದ್ದು, ಕೆಲ ನಾಯಕರು ಮಾರಿಷಸ್ ತೆರಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗರೊಂದಿಗೆ ಮಾರಿಷಸ್‌ನಲ್ಲಿ ಸಿದ್ದರಾಮಯ್ಯನವರು ಪಕ್ಷವನ್ನು ಕಟ್ಟಿ ಬೆಳೆಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಸೇರ್ಪಡೆಗೊಳಿಸುವುದಕ್ಕಾಗಿ ಈಗಾಗಲೇ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಇತರ ಪ್ರಮುಖರು ಈಗಾಗಲೇ ಮಾರಿಷಸ್‌ಗೆ ತೆರಳಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯನವರು ವಿಶ್ರಾಂತಿಗೆಂದು ಮಾರಿಷಸ್‌ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಸಮರ್ಥನೆ ನೀಡಿತ್ತು. ಆದರೆ ಒಂದು ಕಡೆ ಬಜೆಟ್ ಅಧಿವೇಶನ ಸಮೀಪಿಸುತ್ತಿದ್ದು, ಇನ್ನೊಂದೆಡೆ ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ ಕಂಡು ಬಂದಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮಾರಿಷಸ್‌ಗೆ ತೆರಳಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
|