ಮುಂಬರುವ ಚಳಿಗಾಲ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಲು ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಶೀಘ್ರವೇ ಈ ಕುರಿತು ವಿಧಾನಸಭಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವಕನ್ನಡ ಸಮ್ಮೇಳನವನ್ನು ಅದ್ದೂರಿ ನಡೆಸಲು ಸರಕಾರ ತೀರ್ಮಾನಿಸದ್ದು, ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರನ್ನು ಆಹ್ವಾನಿಸಬೇಕೆಂಬುದು ಸರಕಾರದ ಅಪೇಕ್ಷೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಅಭಿವೃದ್ದಿ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಬೆಳಗಾವಿಯಲ್ಲಿನ ವಿವಿಧ ಅಭಿವೃದ್ದಿ ಯೋಜನೆಯನ್ನು ಕೈಗೊಳ್ಳಲು ಶೀಘ್ರವೇ 20ಕೋಟಿ ರೂ. ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
|