ಗಣಿ ಧಣಿಗಳ ಅಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಇಷ್ಟೆಲ್ಲಾ ದಾಂಧಲೆ ನಡೆಸಲು ಕಾರಣವಾಗಿರುವ ಗಣಿಧಣಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಂಬಲ ನೀಡುತ್ತಿರುವುದು ಸರಕಾರದ ಅವನತಿಗೆ ಕಾರಣವಾಗಲಿದೆ ಎಂದು ತಿಳಿಸಿದರು.
ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಬೇಕೆಂದು ಜೆಡಿಎಸ್ ಕಳೆದ ಕೆಲವು ದಿನಗಳಿಂದ ಹೇಳುತ್ತಾ ಬಂದಿದೆ. ಯುಪಿಎ ಸರಕಾರಕ್ಕೂ ಗಣಿಗಾರಿಕೆ ರಾಷ್ಟ್ರೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಷ್ಟ್ರೀಕರಣವಾದರೆ ಮಾತ್ರ ಕೆಲವರ ಹಿಡಿತದಲ್ಲಿರುವ ಗಣಿಗಳಿಗೆ ಮುಕ್ತಿ ದೊರೆಯಬಹುದೆಂದು ಅವರು ಅಭಿಪ್ರಾಯ ಪಟ್ಟರು.
"ತಾವು ಪ್ರಧಾನಿಯಾಗಿದ್ದ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಏಕೆ ಮಾಡಿಲ್ಲ" ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಂದರ್ಭದಲ್ಲಿ ರಾಜ್ಯದಲ್ಲಿ ಇಷ್ಟೊಂದು ಮಟ್ಟದಲ್ಲಿ ಗಣಿಗಾರಿಕೆ ನಡೆದಿರಲಿಲ್ಲ. ಒಂದು ವೇಳೆ ಹೀಗಾಗುತ್ತದೆ ಎಂದು ತಿಳಿದಿದ್ದರೆ ಅಂದೇ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡುತ್ತಿದ್ದೆ ಎಂದು ತಿಳಿಸಿದರು.
|