ಕೇಂದ್ರ ಸರಕಾರಕ್ಕೆ ಬೆಂಬಲ ನೀಡಬೇಕೆ ಅಥವಾ ಎಡಪಕ್ಷಗಳ ತೀರ್ಮಾನಕ್ಕೆ ತಲೆಬಾಗಬೇಕೆ ಎಂಬ ಗೊಂದಲದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಇದ್ದಾರೆ.
ಈ ಬಗ್ಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿರುವ ದೇವೇಗೌಡರು, ಯುಪಿಎಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ, ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಕೇಂದ್ರ ಸರಕಾರ ವಿಶ್ವಾಸಮತ ಯಾಚನೆಗೆ ಇನ್ನು ಏಳೆಂಟು ತಿಂಗಳು ಬಾಕಿ ಇರುವುದರಿಂದ ಈ ಬಗ್ಗೆ ದೇವೇಗೌಡರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಆದರೆ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸಹಕಾರ ಜೆಡಿಎಸ್‌ಗೆ ಅಗತ್ಯ. ಅಣು ಒಪ್ಪಂದ ಕುರಿತು ಎಡಪಕ್ಷಗಳ ನಿಲುವು ಸರಿಯಾಗಿದ್ದು ಎಂಬುದು ದೇವೇಗೌಡರ ಅಭಿಪ್ರಾಯವಾದರೂ, ರಾಜ್ಯ ರಾಜಕೀಯಕ್ಕೆ ಇದರಿಂದ ಆಗುವ ಲಾಭವೇನು ಎಂದು ಗೌಡರು ಯೋಚಿಸುತ್ತಿದ್ದಾರೆ.
ಅಲ್ಲದೆ, ದೇಶದಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಪ್ರಾರಂಭಿಸಿದ್ದಾರೆ. ಹೈದ್ರಬಾದ್‌ಗೆ ತೆರಳಿ ಟಿಡಿಪಿ ನಾಯಕ ಚಂದ್ರಬಾಬುನಾಯ್ಡು ಜೊತೆ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಯುಪಿಎಗೆ ಬೆಂಬಲ ನೀಡಬೇಕೆ ಬೇಡವೇ ಎಂಬ ಬಗ್ಗೆ ದೇವೇಗೌಡರು ಇನ್ನೆರಡು ದಿನಗಳಲ್ಲಿ ಸ್ಪಷ್ಟ ಪಡಿಸುವ ಸಾಧ್ಯತೆ ಇದೆ.
|