ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಅಧಿಕಾರ ಸ್ವೀಕರಿಸಿಕೊಂಡಿರುವ ಬಿಜೆಪಿ ಸರಕಾರ ತನ್ನ ಚೊಚ್ಚಲ ಬಜೆಟನ್ನು ಇದೇ ಗುರುವಾರದಂದು ಮಂಡಿಸಲಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಜ್ಞರೊಂದಿಗೆ ಸಮಲೋಚನೆ ನಡೆಸಿ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ತಿಳಿಸಿರುವಂತೆ ಬಜೆಟ್‌ನಲ್ಲಿ ರೈತಪರ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರಿಗೆ ಉಚಿತ ವಿದ್ಯುತ್ ನೀಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ವಿದ್ಯುತ್ ಅಭಾವ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸರಕಾರ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದು ಮುಖ್ಯವಾಗಿದೆ. ಅಲ್ಲದೆ, ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮಸ್ಯೆಗೆ ಇನ್ನಷ್ಟೆ ಪರಿಹಾರ ಕಂಡುಕೊಳ್ಳಬೇಕಿದೆ. ಹಾಗೆಯೇ ಕಬ್ಬು ಬೆಳೆಗಾರರಿಗೆ ಹಾಗೂ ರೈತರ ಆತ್ಮಹತ್ಯೆಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರಕಾರ ದಿಟ್ಟ ಹೆಜ್ಜೆ ಇಡಬೇಕಿದೆ.
ಈ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಿರುವ ಅಂಶಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಬಿಜೆಪಿ ತಿಳಿಸಿದ್ದು, ಅವುಗಳಲ್ಲಿ ಕೆಲವನ್ನಾದರೂ ಬಜೆಟ್ನಲ್ಲಿ ಪ್ರಸ್ತಾವನೆ ಮಾಡುವ ಸಾಧ್ಯತೆಗಳಿವೆ.
|