ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿದ್ದು ಶೀಘ್ರ ಪರಿಹಾರ ಕಾರ್ಯ ಆರಂಭಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಮಳೆಬಂದ ಕಡೆ ರಸಗೊಬ್ಬರ ಪೂರೈಕೆ ಸಮರ್ಪಕವಾಗಿಲ್ಲ. ಹೀಗಿರುವಾಗ ಸರಕಾರ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ. ರಾಜ್ಯದ 175 ತಾಲೂಕುಗಳ ಪೈಕಿ 124 ತಾಲೂಕಿಗಳಲ್ಲಿ ಮಳೆ ಕಡಿಮೆ ಇದೆ. ಅದರಲ್ಲೂ 101 ತಾಲೂಕುಗಳಲ್ಲಿ ಅತಿಕಡಿಮೆ ಅಥವಾ ಮಳೆಯೇ ಬಂದಿಲ್ಲ ಎಂಬ ಪರಿಸ್ಥಿತಿ ಇದೆ. ಆದ್ದರಿಂದ ಸರಕಾರ ಶೀಘ್ರ ಕಾರ್ಯಪ್ರವೃತ್ತವಾಗಿ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ನುಡಿದರು.
ಉಚಿತ ಸುಳ್ಳು! ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ಕೊಡುತ್ತೇವೆ ಎಂದವರು ಇದೀಗ ಸಮಯಕ್ಕೊಂದು ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಈಶ್ವರಪ್ಪನವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ ಎಂದರೆ, ಮುಖ್ಯಮಂತ್ರಿಗಳು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಶಂಕರ ಮೂರ್ತಿ ವಿದ್ಯುತ್ ಕೊಡಲು ಸಾಧ್ಯವಿಲ್ಲವೆನ್ನುತ್ತಾರೆ. ಈ ನಾಟಕ ನಿಲ್ಲಿಸಿ ಸರಕಾರ ಈ ಕುರಿತು ಸ್ಪಷ್ಟ ಹೇಳಿಕೆ ನೀಡಬೇಕೆಂದು ಇದೇ ಸಂದರ್ಭದಲ್ಲಿ ಖರ್ಗೆ ಒತ್ತಾಯಿಸಿದರು.
ಯುಪಿಎ ಸರಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಜೆಡಿಎಸ್ ಪರಮೋಚ್ಚ ನಾಯಕ ಎಚ್.ಡಿ. ದೇವೇಗೌಡರೊಂದಿಗೆ ಹೈಕಮಾಂಡ್ ಚರ್ಚೆ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಚಿತ್ರನಟ ಜಗ್ಗೇಶ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಖರ್ಗೆ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.
|