ರಾಮನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರವನ್ನು ಸರಕಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಮಂಜೂರಾಗಿದ್ದ ಈ ಯೋಜನೆಗೆ ಕಾನೂನು ತೊಡಕು ಸೃಷ್ಟಿಸುವ ಸಂಚು ನಡೆಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಜಮೀನು ಲಭ್ಯವಿದ್ದರೂ ಗುತ್ತಿಗೆದಾರರಿಗೆ ಮುಂಗಡ ಹಣ ನೀಡಿದ್ದರೂ, ಅವ್ಯವಹಾರ ನಡೆದಿದೆ ಎಂದು ಸರಕಾರ ಆರೋಪ ಮಾಡಿರುವುದು ಕೇವಲ ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.
ಕುಮಾರಸ್ವಾಮಿ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬಾರದೆಂದು ಬಿಜೆಪಿ ನಾಯಕರು ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ. ಶೀಘ್ರವೇ ವಿವಿ ಕಾಮಗಾರಿಗೆ ಸರಕಾರ ಚಾಲನೆ ನೀಡಬೇಕೆಂದು ಅವರು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅಪರೇಷನ್ ಕಮಲ ಎಂದು ಹೇಳುವ ಮೂಲಕ ಬಿಜೆಪಿ ಬೇರೆ ಪಕ್ಷದ ನಾಯಕರನ್ನು ಸೆಳೆಯುತ್ತಿದೆ. ಆದರೆ ಈ ಬಗ್ಗೆ ಶೀಘ್ರವೇ ಜನತೆಗೆ ತಿಳಿಯಲಿದೆ ಎಂದು ಹೇಳಿದರು.
|