ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದ ಚೊಚ್ಚಲ ಬಜೆಟಿನೊಳಗೇನಿದೆ?  Search similar articles
ಶ್ರೀಕಲಾ ರಾವ್ (ನ್ಯೂಸ್‌ರೂಮ್)

PTI
ರಾಜ್ಯ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಗುರುವಾರ ಮಧ್ಯಾಹ್ನ 12ಗಂಟೆಗೆ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.

ಅಧಿಕಾರಕ್ಕೂ ಮುನ್ನ ರೈತರಿಗೆ ಉಚಿತ ವಿದ್ಯುತ್, 2 ರೂಪಾಯಿಗೆ ಒಂದು ಕೆಜಿ ಅಕ್ಕಿ, ಮೀನುಗಾರರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಇವೆಲ್ಲವನ್ನು ಯಡಿಯೂರಪ್ಪ ಬಜೆಟ್‌ನಲ್ಲಿ ಕಾರ್ಯಗತಗೊಳಿಸಲಿದ್ದಾರೆಯೇ ಎಂಬುದು ಕುತೂಹಲದ ಪ್ರಶ್ನೆ.

ಈಗಾಗಲೇ ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ರೈತ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಅಭಾವ, ರೈತರ ಆತ್ಮಹತ್ಯೆ ಸೇರಿದಂತೆ ಹಲವು ಸಮಸ್ಯೆಗಳು ರಾಜ್ಯದಲ್ಲಿ ತಾಂಡವವಾಡುತ್ತಿದೆ. ಬಿಜೆಪಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಲ್ಲ ಒಂದು ಸಮಸ್ಯೆ ಸರಕಾರವನ್ನು ಕಾಡುತ್ತಿದೆ. ಒಂದು ಕಡೆ ರೈತರ ಹಾಹಾಕಾರವಾದರೆ ಇನ್ನೊಂದೆಡೆ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಎರಡು ಬಾರಿ ಬಜೆಟ್ ಮಂಡಿಸಿದ ಅನುಭವ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಇದೆ. ಇವೆಲ್ಲಕ್ಕಿಂತ ಉತ್ತಮವಾದ ಬಜೆಟ್ ಮಂಡಿಸಲು ಸರಕಾರ ನಿರ್ಧರಿಸಿದೆ. ಆದರೆ ಪ್ರಣಾಳಿಕೆಯಲ್ಲಿ ತಿಳಿಸಿರುವ ಅಂಶಗಳನ್ನು ಜಾರಿ ತರುವಲ್ಲಿ ಸ್ವಲ್ಪ ಕಷ್ಟವಾಗಬಹುದು. ಈ ಮೊದಲೇ ತಿಳಿಸಿರುವಂತೆ ರಾಜ್ಯದಲ್ಲಿ ವಿದ್ಯುತ್ ಅಭಾವ ಕಂಡು ಬಂದಿರುವುದರಿಂದ ದಿನದ 24 ಗಂಟೆಯೂ ವಿದ್ಯುತ್ ನೀಡುವುದೇ ಕಷ್ಟ, ಇಂತಹ ವೇಳೆ ಉಚಿತ ವಿದ್ಯುತ್ ಮಾತು ಎಲ್ಲಿ ಬಂತು. ಆದರೂ ಬಿಜೆಪಿ ಈ ಯೋಜನೆಯ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದಂದೇ ತಮ್ಮದು ರೈತಪರ ಸರಕಾರ ಎಂದು ಘೋಷಿಸಿದ್ದಾರೆ. ಅದನ್ನು ಈಗ ನಿಜಮಾಡಬೇಕಿದೆ. ಪ್ರಣಾಳಿಕೆಯಲ್ಲಿ ತಿಳಿಸಿರುವ ಅಂಶಗಳನ್ನು ಈಡೇರಿಸಬೇಕಾದರೆ ಕನಿಷ್ಠ ಒಂದು ಲಕ್ಷ ಕೋಟಿ ರೂ. ಅವಶ್ಯಕತೆಯಿದೆ ಎಂಬುದು ಅಂದಾಜು. ಈ ಹಿನ್ನೆಲೆಯಲ್ಲಿ ಈ ಬಾರಿ ಸರಕಾರ ಕೊರತೆ ಬಜೆಟ್ ಮಂಡಿಸುವುದು ಅನಿವಾರ್ಯ.

ಈ ಮಧ್ಯೆ ಲೋಕಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಪಕ್ಷವನ್ನು ಬಲಪಡಿಸಲು ದುಬಾರಿ ಬಲೆ ತೆತ್ತಾದರೂ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸುವ ಕುರಿತು ಸರಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಪ್ರಣಾಳಿಕೆಯ ಪ್ರಮುಖ ಭರವಸೆಗಳು
- ಶೇ.3ರ ಬಡ್ಡಿದರದಲ್ಲಿ ರೈತರಿಗೆ ಬೆಳೆ ಸಾಲ. ಕೃಷಿಗೆ ಬೆಂಬಲ ಬೆಲೆ ಮತ್ತು ಬೆಲೆ ಕುಸಿತ ತಡೆಗೆ ಆವರ್ತ ನಿಧಿ ಸ್ಥಾಪನೆ. ಅಲ್ಲದೆ, ಕೃಷಿ ಉತ್ಪನ್ನ ಖರೀದಿಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ.
- ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 2ರೂ. ಪ್ರೋತ್ಸಾಹ ಧನ. ಹಾಗೆಯೇ ರೇಷ್ಮೆಗೆ ಬೆಂಬಲ ಬೆಲೆ.
- ರೈತರಿಗೆ ಉಚಿತ ವಿದ್ಯುತ್. ಹಾಗೆಯೇ ದಿನದ 24ಗಂಟೆಯೂ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ವಿದ್ಯುತ್.
- ಭಾಗ್ಯಲಕ್ಷ್ಮೀ ಯೋಜನೆಯ ಪೂರ್ಣಫಲದ ಮೊತ್ತವನ್ನು 34 ಸಾವಿರ ರೂ. ನಿಂದ 1ಲಕ್ಷ ರೂ.ಗೆ ಹೆಚ್ಚಿಸುವುದು.
- ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಮೂಲಧನವನ್ನು 5ರಿಂದ 10 ಸಾವಿರಕ್ಕೆ ಹೆಚ್ಚಿಸುವುದು.

ಜನ ಏನಂತಾರೆ?
ಕೆ.ಎನ್. ವಾಸುದೇವ ಅಡಿಗ, ಬೃಹತ್ ಹೋಟೆಲ್ ಅಸೋಸಿಯೇಶನ್
ಸಾರ್ವಜನಿಕರ ಮೇಲೆ ಹೇರಿರುವ ಮಾರಾಟ ತೆರಿಗೆಯನ್ನು ಕಡಿತಗೊಳಿಸಬೇಕು. ಹಾಗೆಯೇ ಗ್ಯಾಸ್ ಸಿಲಿಂಡರ್‌ಗೆ ಏರಿಸಿರುವ ಬೆಲೆಯನ್ನು ಕಡಿತಗೊಳಿಸಬೇಕು. ಮಹಾನಗರ ಪಾಲಿಕೆ ಕಸತ್ಯಾಜ್ಯ ವಿಲೇವಾರಿಗೆ ಹೊಟೇಲ್ ಉದ್ಯಮಕ್ಕೆ ವಿಧಿಸಿರುವ 1ರೂ. ಬೆಲೆಯನ್ನು ತೆಗೆದು ಹಾಕಬೇಕು. ಈಗಿರುವ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಅಂತೆಯೇ ಫುಟ್ಪಾತ್ ಮೇಲೆ ನಡೆಸುತ್ತಿರುವ ತಳ್ಳುಗಾಡಿ ವ್ಯಾಪಾರವನ್ನು ಮುಚ್ಚಿಸಬೇಕು.

ಅಂಬಿಕಾ ರಾಧಾಕೃಷ್ಣ, ಉದ್ಯೋಗಿ, ಬೆಂಗಳೂರು
ಬೆಂಗಳೂರು ಮೂಲ ಸೌಕರ್ಯ ಅಭಿವೃದ್ದಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಳೆ ಬಂದಾಗ ಬಡಾವಣೆಗಳು ಜಲಾವೃತ್ತವಾಗುತ್ತವೆ. ರಾಜಕಾಲುವೆ ದುರಸ್ಥಿ, ಸಂಚಾರ ಒತ್ತಡ ನಿಯಂತ್ರಣಕ್ಕೆ ಹೊಸ ಯೋಜನೆ ಜಾರಿ ಮಾಡಬೇಕು.

ಗಣೇಶ್ ಹೆಬ್ಬಾರ್, ಡೈರೆಕ್ಟರ್, ಟೈಮ್ ಇನ್ಸ್ಟಿಟ್ಯೂಟ್, ಮಂಗಳೂರು
ರಾಜ್ಯದಲ್ಲಿ ಹೆಚ್ಚಾಗಿರುವ ಪೆಟ್ರೋಲ್ ಉತ್ಪನ್ನಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿತಗೊಳಿಸಬೇಕು. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಒಟ್ಟಿನಲ್ಲಿ ಎಲ್ಲಾ ವರ್ಗದ ಜನರು ನೂತನ ಸರಕಾರದ ಮೊದಲ ಬಜೆಟ್‌ಗೆ ಕಾತರದಿಂದ ಕಾಯುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಅಕಾಂಕ್ಷೆಗಳು ಜನರ ಮನದಲ್ಲಿದೆ. ಇವೆಲ್ಲದಕ್ಕೆ ಯಡಿಯೂರಪ್ಪ ನಾಳೆಯವರೆಗೆ ತಾಳ್ಮೆಯಿಂದ ಕಾಯಿರಿ ಎಂದಿದ್ದಾರೆ. ಕಾದು ನೋಡೋಣ.
ಮತ್ತಷ್ಟು
ವಿಶ್ವಾವಿದ್ಯಾಲಯ ಸ್ಥಳಾಂತರಕ್ಕೆ ಹುನ್ನಾರ: ರೇವಣ್ಣ
ದಾವಣಗೆರೆಯಲ್ಲಿ ರೈತ ಆತ್ಮಹತ್ಯೆ
ಬಿಜೆಪಿಗೆ ಮತ್ತೊಬ್ಬ 'ದಳಪತಿ'
ವಿವಾದದ ಸುಳಿಯಲ್ಲಿ ರೋಷನ್ ಬೇಗ್
ಅರ್ಥಶಾಸ್ತ್ರ-ವಾಣಿಜ್ಯಶಾಸ್ತ್ರ ಕದನ
ಸರಕಾರದಿಂದ ಸಮಯಕ್ಕೆ ತಕ್ಕ ಸುಳ್ಳು: ಖರ್ಗೆ