ನಾಳೆಯಿಂದ ಪ್ರಾರಂಭಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿವೆ ಎಂದು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ವಿಧಾನಸಭಾಧಿವೇಶನದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2008 ಹಾಗೂ ಕರ್ನಾಟಕ ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕ-2007 ಮಂಡನೆಯಾಗಲಿದೆ ಎಂದು ತಿಳಿಸಿದರು.
ಅಧಿವೇಶನದ ಮೊದಲ ದಿನದಂದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಬಳಿಕ ಅಧಿವೇಶನ ಮುಂದಿನ ದಿನಕ್ಕೆ ಮುಂದೂಡಲ್ಪಡಲಿದ್ದು, ಬಜೆಟ್ ಕುರಿತು ಚರ್ಚೆ ನಡೆಯಲಿದೆ. ಇದೇ ತಿಂಗಳು 31ರವರೆಗೆ ಒಟ್ಟು 11 ದಿನಗಳ ಕಲಾಪ ನಡೆಯಲಿದೆ ಎಂದು ಅವರು ಹೇಳಿದರು.
ಕಳೆದ ಅಧಿವೇಶನದಲ್ಲಿ ಕೆಲ ಸದಸ್ಯರು ತಮ್ಮ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದು, ಈ ಅಧಿವೇಶನದಲ್ಲಿ ತಮ್ಮ ಟೀಕೆಗೆ ಪ್ರತ್ಯುತ್ತರ ನೀಡುವುದಾಗಿ ಅವರು ಈ ವೇಳೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯರಿಗೆ ಕಿವಿಮಾತು ಹೇಳಿದ ಅವರು, ಸದನದಲ್ಲಿ ಸದಸ್ಯರು ಧರಣಿ, ಘೋಷಣೆ ಮುಂತಾದ ಪ್ರತಿಭಟನೆಗಳ ಮೂಲಕ ಕಲಾಪ ನಿರ್ವಹಣೆಗೆ ಭಂಗ ತರುವುದು ಸರಿಯಲ್ಲ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಂಸದೀಯ ಕಲಾಪ ಕುರಿತು ನೂತನ ಸದಸ್ಯರಿಗೆ ತರಬೇತಿ ನೀಡುವ ಉದ್ದೇಶವೂ ಇದೆ ಎಂದು ತಿಳಿಸಿದರು.
|