ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಮೂಡಿದ ಜನತಾ ಪರಿವಾರದಲ್ಲಿ ಒಡಕನ್ನು ಮತ್ತೆ ಸರಿಪಡಿಸುವ ಪ್ರಯತ್ನಕ್ಕೆ ಜೆಡಿಯು ಮುಖಂಡ ಎಂ.ಪಿ. ನಾಡಗೌಡ ಮುಂದಾಗಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜನತಾ ಪರಿವಾರವನ್ನು ಮತ್ತೆ ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಇಂದು ಜನತಾಪರಿವಾರ ಹರಿದು ಹಂಚಿ ಹೋಗಿದೆ. ಪರಿವಾರ ತೊರೆದು ಇತರೆ ಪಕ್ಷಕ್ಕೆ ಸೇರಿರುವವರನ್ನು ಪುನಃ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಬಿಎಸ್ಪಿಯಿಂದ ಉಚ್ಚಾಟಿತರಾಗಿರುವ ಸಿಂಧ್ಯಾ ಅವರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್ ಸೇರಿದಂತೆ ಪರಿವಾರ ತೊರೆದವರನ್ನು ಮತ್ತೆ ಕರೆದುಕೊಂಡು ಬಂದು, ಪಕ್ಷವನ್ನು ಸಂಘಟಿಸಲಾಗುವುದು. ಹಾಗೆಯೇ ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
|