ಭಯೋತ್ಪಾದನೆಯನ್ನು ಸಮರ್ಥವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಗುರುತು ಪತ್ರ ವ್ಯವಸ್ಥೆಯನ್ನು ಮಾಡುವುದಲ್ಲದೆ, ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಡ್ ಕ್ರೈಮ್ಸ್ ಆಕ್ಟ್(ಕೆಸಿಒಸಿಎ)ಅನ್ನು ತಿದ್ದುಪಡಿ ಮಾಡುವ ಕುರಿತು ನಿರ್ಧಾರ ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಸೋಮವಾರದಂದು ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸರಕಾರ ಕೋಕಾ(ಕೆಸಿಒಸಿಎ)ಕಾಯ್ದೆಯನ್ನು ತಿದ್ದುಪಡಿ ಮಾಡುವುದಾಗಿ ಹೇಳಿದರು.
ಅಲ್ಲದೇ ಫೋಟಾ ಕಾಯ್ದೆಯನ್ನು ಸರಕಾರ ಮತ್ತೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಿಸುವುದಾಗಿ ಹೇಳಿದರು.
ಆ ನಿಟ್ಟಿನಲ್ಲಿ ಪ್ರಮುಖ ನಗರಗಳಲ್ಲಿ ವಾಸವಾಗಿರುವ ಜನರಿಗೆ ಗುರುತು ಪತ್ರ ನೀಡುವ ಬಗ್ಗೆ ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಭಯೋತ್ಪಾದಕ ನಿಗ್ರಹ ದಳವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಭಯೋತ್ಪಾದಕರ ಆಶ್ರಯದಾತರು ಯಾರು: ರಾಜಧಾನಿ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ರಾಜ್ಯವನ್ನು ಪ್ರವೇಶಿಸಿ, ಆ ಮೂಲಕವೇ ಸ್ಫೋಟಕ ಸಾಗಣೆ ಮಾಡುತ್ತಿರುವುದಾಗಿ ಹೇಳಿದರು. ಆದರೆ ಭಯೋತ್ಪಾದಕರಿಗೆ ಯಾರು ಆಶ್ರಯ ನೀಡುತ್ತಿದ್ದಾರೆ ಮತ್ತು ಆಯುಧಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ತಿಳಿಸಿದರು.
ಎಚ್ಚರಿಕೆ: ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸಾರ್ವಜನಿಕರು ಆಡಳಿತದೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡ ಯಡಿಯೂರಪ್ಪ, ಮನೆ ಮಾಲೀಕರು ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕೆಂದು ಹೇಳಿದರು.
ಒಂದು ಸಾವಿರ ರೂಪಾಯಿ ಬೆಲೆಯ ಸ್ಥಳವನ್ನು 5 ಸಾವಿರ ರೂ.ನೀಡುವುದಾಗಿ ಬೇಡಿಕೆ ಸಲ್ಲಿಸಿದರೆ, ಇದು ಅನುಮಾನ ಪಡಬೇಕಾದ ವಿಷಯವೇ, ಇಂತಹ ಪ್ರಕರಣಗಳನ್ನು ಜನರು ಪೊಲೀಸರ ಗಮನಕ್ಕೆ ತರಬೇಕು ಎಂಬುದಾಗಿ ಎಚ್ಚರಿಸಿದರು.
ನಾವು ವಿದೇಶಗಳಿಗೆ ತೆರಳಿದರೆ ನಮ್ಮ ವೀಸಾದ ಅವಧಿ ಮುಗಿದ ಬಳಿಕ ನಮ್ಮನ್ನು ಹೊರಗಟ್ಟುತ್ತಾರೆ, ಆದರೆ ಕರ್ನಾಟಕದಲ್ಲಿ ಯಾರು ಬೇಕಾದರು ಯಾವುದೇ ಸಮಸ್ಯೆ ಇಲ್ಲದೆ ಎಷ್ಟು ದಿನ ಬೇಕಾದರೂ ವಾಸಿಸಬಹುದಾಗಿದೆ ಎಂದು ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದರು.
|