ಕಾಡುಗಳ್ಳ, ದಂತಚೋರ ವೀರಪ್ಪನ್‌ನಿಂದ ಅಪಹರಣಗೊಂಡು ಹತ್ಯೆಗೊಳಗಾಗಿದ್ದ ಮಾಜಿ ಸಚಿವ ಹೆಚ್. ನಾಗಪ್ಪ ಅವರ ಪ್ರಕರಣದ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯವು ಮಂಗಳವಾರ ಆರಂಭಿಸಿದೆ.
ಈ ಬಗ್ಗೆ ಸಾಕ್ಷಿ ನೀಡಿದ ನಾಗಪ್ಪ ಪತ್ನಿ ಪರಿಮಳಾ ನಾಗಪ್ಪ ಅವರು, ನಾಗಪ್ಪ ಅಪಹರಣದ ಸಂದರ್ಭದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಗುರುತಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿರುವ 16 ಮಂದಿಯಲ್ಲಿ ನರಹಂತಕ ವೀರಪ್ಪನ್‌ನೊಂದಿಗೆ ನಾಗಪ್ಪ ಅವರನ್ನು ಅಪಹರಿಸಲು ಬಂದಿದ್ದ ಸೆಲ್ವನ್ ಹಾಗೂ ಶಂಕರ್ ಎಂಬುವವನ್ನು ಪರಿಮಳಾ ಗುರುತಿಸಿ ಸಾಕ್ಷಿ ನುಡಿದಿದ್ದಾರೆ.
ಅಲ್ಲದೆ, ಅಪಹರಣ ಹಾಗೂ ಹತ್ಯೆಯ ಕುರಿತು ಸವಿವರವಾದ ವಿವರವನ್ನು ಅವರು ನೀಡಿದ್ದಾರೆ. ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ಪ್ರಕರಣದ ವಿಚಾರಣೆ ಯನ್ನು ನಡೆಸಿದರು.
ಈ ಪ್ರಕರಣದಲ್ಲಿ ಒಟ್ಟು 23 ಮಂದಿ ಆರೋಪಿಗಳಾಗಿದ್ದು, ಇವರಲ್ಲಿ ನರಹಂತಕ ವೀರಪ್ಪನ್ ಸೇರಿದಂತೆ ನಾಲ್ವರು ಎಸ್‌ಟಿಎಫ್ ಕಾರ್ಯಾಚರಣೆ ವೇಳೆ ಗುಂಡಿಗೆ ಬಲಿಯಾಗಿದ್ದರು. ಈ ಪ್ರಕರಣವನ್ನು ನ್ಯಾಯಾಲಯವು ಮೂರು ಹಂತಗಳಲ್ಲಿ ನಡೆಸಲಿದ್ದು, 154 ಮಂದಿ ಸಾಕ್ಷಿದಾರರಿದ್ದಾರೆ.
|