ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸದನದಲ್ಲಿ ಮಂಗಳವಾರ ಪ್ರಕರಣದ ನಿಲುವಳಿ ಸೂಚನೆ ಮಂಡನೆಯ ಪೂರ್ವಭಾವಿ ಪ್ರಸ್ತಾಪ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತನಿಖೆ ನಿಸ್ಪಕ್ಷಪಾತವಾಗಿ ನಡೆಯುವ ಅಗತ್ಯವಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸಮಂಜಸ ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತು ಗೃಹ ಸಚಿವರು ಮೊದಲು ಪ್ರಕರಣವನ್ನು ಆತ್ಮಹತ್ಯೆ ಎಂದು ತಿಳಿಸಿದರು. ಹಾಗೆಯೇ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ, ಗೋವಾ ಮತ್ತು ದೆಹಲಿ ಪೊಲೀಸರು ಈ ತನಿಖೆಯನ್ನು ನಡೆಸುತ್ತಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದ ಅವರು, ಸಿಬಿಐ ತನಿಖೆಯೇ ಸೂಕ್ತ ಎಂದು ಸರ್ಕಾರ ಪ್ರಕಟಿಸಿದರೆ ಸದನದಲ್ಲಿ ಮತ್ತೆ ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
|