ರಾಜ್ಯ ವಿಧಾನಸಭೆಯ ಉಪಾಧ್ಯಕ್ಷರಾಗಿ ಆಡಳಿತಾರೂಢ ಬಿಜೆಪಿಯ ಕೆ.ಜಿ. ಬೋಪಯ್ಯ ಸರ್ವಾನುಮತದಿಂದ ಮಂಗಳವಾರ ಆಯ್ಕೆಯಾಗಿದ್ದಾರೆ.
ಇಂದು ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಉಪಾಸಭಾಧ್ಯಕ್ಷರ ಆಯ್ಕೆಯ ಪ್ರಸ್ತಾಪವನ್ನು ಮಂಡಿಸಿದರು. ಅದರಂತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕೆ.ಜಿ. ಬೋಪಯ್ಯನವರನ್ನು ಉಪಾಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಸದನದಲ್ಲಿ ಮಂಡಿಸಿದರು.
ಇದನ್ನು ಸದಸ್ಯ ಎಸ್.ಆರ್. ವಿಶ್ವನಾಥ್ ಅನುಮೋದಿಸಿದರು. ನಂತರ ಸಭಾಧ್ಯಕ್ಷರು ಈ ಪ್ರಸ್ತಾಪವನ್ನು ಮತಕ್ಕೆ ಹಾಕಿದಾಗ ಸದನ ಅದನ್ನು ಧ್ವನಿಮತದ ಮೂಲಕ ಅಂಗೀಕರಿಸಿತು. ಬಳಿಕ ಜಗದೀಶ್ ಶೆಟ್ಟರ್ ಅವರು ಉಪಾಸಭಾಧ್ಯಕ್ಷರಾಗಿ ಕೆ.ಜಿ. ಬೋಪ್ಪಯ್ಯನವರ ಆಯ್ಕೆಯನ್ನು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ವಿ.ಎಸ್. ಆಚಾರ್ಯ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಶಾಸಕ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸಭಾಧ್ಯಕ್ಷರನ್ನು ಅಭಿನಂದಿಸಿದರು.
ಪ್ರೊ. ಬಿ.ಕೆ. ಚಂದ್ರಶೇಖರ್ ಸ್ಥಾನಕ್ಕೆ ತೆರವಾದ ಸ್ಥಾನದಲ್ಲಿ ಬೋಪಯ್ಯ ನೇಮಕಗೊಂಡಿದ್ದಾರೆ. ಎರಡು ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆಯಿಂದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
|