ರೈತರು ಬೆಳೆದ ಕಬ್ಬಿಗೆ ಇನ್ನೂ ಬೆಂಬಲ ಬೆಲೆ ಘೋಷಿಸಿಲ್ಲ, ಬಡವರಿಗೆ ಅಕ್ಕಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದರೂ ಜಾರಿಗೆ ಬಂದಿಲ್ಲ. ಒಟ್ಟಿನಲ್ಲಿ ಇದೊಂದು ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತಪರ ಬಜೆಟ್ ಎಂದು ತಿಳಿಸಿರುವ ಮುಖ್ಯಮಂತ್ರಿಗಳು ಇದುವರೆಗೆ ರೈತರಿಗೆ ಬಜೆಟ್‌ನಲ್ಲಿ ತಿಳಿಸಿರುವ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಜಾಹೀರಾತುಗಳಲ್ಲಿ ಸಂಪೂರ್ಣ ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ತಿಳಿಸಿದ್ದರೂ, ಇನ್ನೂ ಜಾರಿಗೆ ತಂದಿಲ್ಲ ಎಂದು ಟೀಕಿಸಿದ್ದಾರೆ.
ಅಲ್ಲದೆ, ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ ಬೊಕ್ಕಸದಲ್ಲಿ ಹಣವೇ ಇಲ್ಲ. ಅಲ್ಲದೆ, ಪ್ರಕಟಿಸಲಾಗಿರುವ ಹಲವು ಯೋಜನೆಗಳಿಗೆ ಅನುದಾನವನ್ನೇ ಪ್ರಕಟಿಸಿಲ್ಲ ಎಂದು ದೂರಿದ್ದಾರೆ.
ಇದೇ ವೇಳೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹಲವು ಕಡೆಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಆದರೆ ಜೆಡಿಎಸ್ ಪಕ್ಷವಂತೂ ಈ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ. ಬೇಕಾದರೆ ತಮ್ಮ ಪಕ್ಷದ ಇನ್ನೂ 10 ಶಾಸಕರನ್ನು ಸೆಳೆದುಕೊಂಡರೂ ಚಿಂತೆ ಇಲ್ಲ ಎಂದು ಕಿಡಿಕಾರಿದರು.
|