ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿನ ಪ್ರೇಕ್ಷಣೀಯ ಸ್ಥಳಗಳು ಹಾಗೂ ಮುಖ್ಯ ಕಚೇರಿಗಳ ಮೇಲೆ ಉಗ್ರರು ಈ ಹಿಂದೆ ಸ್ಫೋಟ ಸಂಚು ರೂಪಿಸಿದ್ದು, ಆದರೆ ಅದಕ್ಕೆಂದು ಬಳಸಲು ಉದ್ದೇಶಿಸಿದ್ದ ಕಾರು ಈಗ ಹುಬ್ಬಳ್ಳಿಯ ಗುಜರಿ ಅಂಗಡಿಯಲ್ಲಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಇಲ್ಲಿನ ಉಪನಗರದಲ್ಲಿ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತರಿಂದ ಈ ಮಹತ್ವದ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಈ ಹಿಂದೆ ರಾಜಧಾನಿಯಲ್ಲಿ ಸ್ಫೋಟದ ಸಂಚಿಗಾಗಿ ಬಳಸಬೇಕೆಂದಿದ್ದ ಕಾರನ್ನು ಹುಬ್ಬಳ್ಳಿಯ ಗುಜರಿ ಅಂಗಡಿಗೆ ಮಾರಲಾಗಿದೆ. ಸ್ಫೋಟಕ್ಕಾಗಿ ಎಂಟು ಬೈಕು ಹಾಗೂ ಒಂದು ಕಾರನ್ನು ಬಳಸುವ ಯೋಜನೆ ರೂಪಿಸಲಾಗಿತ್ತು.
ಆದರೆ ಜನವರಿ 11ರಂದು ಹೊನ್ನಾಳಿಯಲ್ಲಿ ಮಹಮದ್ ಗೌಸ್ ಹಾಗೂ ಅಸಾದುಲ್ಲಾರನ್ನು ಪೊಲೀಸರು ಬಂಧಿಸಿದ್ದರಿಂದ ಈ ಸಂಚು ವಿಫಲಗೊಂಡಿತ್ತು ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಮಹಮದ್ ಗೌಸ್‌ನ ಸಹಚರರು ಉಳಿದ ಬೈಕ್‌ಗಳಿಗೆ ಬೆಂಕಿ ಹಚ್ಚಿ ನೀರಿನಲ್ಲಿ ಮುಳುಗಿಸಿದ್ದರು. ಕಾರನ್ನು ಜಖಂಗೊಳಿಸಿ ನಗರದ ಗುಜರಿ ಅಂಗಡಿಗೆ ಹಾಕಿದ್ದಾರೆ.
ಆದರೆ ಶಂಕಿತ ಉಗ್ರರ ಬೆನ್ನಟ್ಟಿ ಹುಬ್ಬಳ್ಳಿಗೆ ಬಂದಿದ್ದ ಸಿಓಡಿ 14ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಈ ನಡುವೆ ಹುಬ್ಬಳ್ಳಿಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಉಗ್ರರು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
|