ರಾಜ್ಯದಲ್ಲಿ ಹೊಸದಾಗಿ ಸಾವಿರ ಮದ್ಯದಂಗಡಿ ಹಾಗೂ 500 ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಪರವಾನಿಗೆ ನೀಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದಕ್ಕೆ ಪಡೆದಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಒಂದು ಸಾವಿರ ಮದ್ಯದಂಗಡಿ ಆರಂಭಿಸಲು ಪರವಾನಿಗೆ ನೀಡಲು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಶಾಸಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ವಿರೋಧ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗಣಿಗಾರಿಕೆಯ ಕುರಿತು ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ತಡೆಯಲು ಸರ್ಕಾರ ಬದ್ದವಾಗಿದ್ದು, ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಹೊಸ ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಅಲ್ಲದೆ, ಹಿಂದಿನ ಗುತ್ತಿಗೆಗಳನ್ನು ನವೀಕರಿಸಿಲ್ಲ ಎಂದು ವಿವರಣೆ ನೀಡಿದರು.
ಮುಂದಿನ ಅಧಿವೇಶನ ಬೆಳಗಾವಿಯಲ್ಲಿ:
ಮುಂದಿನ ವಿಧಾನಸಭಾ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಅಲ್ಲಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
|