ಹೊಗೇನಕಲ್ ವಿವಾದ ಸಂದರ್ಭದಲ್ಲಿ ನಟ ರಜನಿಕಾಂತ್ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿರುವ ಕನ್ನಡಪರ ಸಂಘಟನೆಗಳು ರಜನೀಕಾಂತ್ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿವೆ.
ಗುರುವಾರ ನಗರದ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮಂಡಳಿಯ ಪದಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರಜನಿಕಾಂತ್ ಕನ್ನಡಿಗರಲ್ಲಿ ಕ್ಷಮೆ ಯಾಚಿಸುವವರೆಗೆ ಅವರ ಕುಚೇಲನ್ ಚಿತ್ರ ಪ್ರದರ್ಶನ ರಾಜ್ಯದಲ್ಲಿ ಅಸಾಧ್ಯ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಹೊಗೇನಕಲ್ ಯೋಜನೆ ವಿವಾದ ಸಂದರ್ಭದಲ್ಲಿ ರಜನೀಕಾಂತ್ ಕನ್ನಡಿಗರ ಬಗ್ಗೆ ಅವಮಾನ ಹೇಳಿಕೆ ನೀಡಿದ್ದರೂ, ಕನ್ನಡ ಚಲನಚಿತ್ರ ಮಂಡಳಿ ರಜನಿಕಾಂತ್ ಅವರಿಗೆ ಬೆಂಬಲ ನೀಡಿದೆ. ಅಲ್ಲದೆ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಈ ಕ್ರಮವನ್ನು ಶೀಘ್ರವೇ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಅಲ್ಲದೆ, ಕನ್ನಡಿಗರ ಬಗ್ಗೆ ರಜನಿಕಾಂತ್ ನೀಡಿರುವ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು ಹಾಗೂ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಹಾಗಾದರೆ ಮಾತ್ರ ಕರ್ನಾಟಕದಲ್ಲಿ ಅವರ ಕುಚೇಲನ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಾಗಿ ಕನ್ನಡ ಪರ ಸಂಘಟನೆಗಳು ತಿಳಿಸಿವೆ. ಪ್ರತಿಭಟನೆಯಲ್ಲಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಭಾಗವಹಿಸಿದ್ದರು.
|