ರಾಜ್ಯದೆಲ್ಲೆಡೆ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಆಗಸ್ಟ್‌ನಿಂದ ಲೋಡ್ ಶೆಡ್ಡಿಂಗ್ ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಶಾಖೋತ್ಪನ್ನ ಕೇಂದ್ರ ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದರಿಂದ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.
ಅಲ್ಲದೆ, ಚತ್ತೀಸ್‌ಗಡದಲ್ಲಿ ರಾಜ್ಯದ ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಒಪ್ಪಂದ ನಡೆದಿದೆ. ಅಂತೆಯೇ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ವಿದ್ಯುತ್ ನೀಡಲು ಒಪ್ಪಿಗೆ ನೀಡಿದೆ ಎಂದು ವಿವರಣೆ ನೀಡಿದರು.
ಇದಕ್ಕೂ ಮೊದಲು ಸದನ ಪ್ರಾರಂಭವಾಗುತ್ತಿದ್ದಂತೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಜೆಡಿಎಸ್ ವೈ.ಎಸ್.ವಿ. ದತ್ತಾ, ಬಜೆಟ್‌ನಲ್ಲಿ ಸುಳ್ಳಿನ ಕಂತೆಗಳನ್ನೇ ತಿಳಿಸಲಾಗಿದೆ. ಈಗ ಅದನ್ನು ಸತ್ಯ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಹಳೆ ಯೋಜನೆಗಳಿಗೆ ಹೊಸ ನಾಮಕರಣ ಮಾಡಿದ್ದು ಬಿಟ್ಟರೆ, ಬಜೆಟ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಮೋಟಮ್ಮ, ಬಡತನ ರೇಖೆಗಿಂತ ಕೆಳಗಿರುವವರಿಗೆ ಮನೆ ನಿರ್ಮಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
|