ಭಾರತೀಯ ಜನತಾ ಪಕ್ಷ ಇತರ ಶಾಸಕರನ್ನು ತನ್ನತ್ತ ಸೆಳೆದು ಪಕ್ಷಾಂತರ ರಾಜಕೀಯ ವ್ಯವಹಾರ ಮಾಡಿರುವುದರ ಬಗ್ಗೆ ತನಿಖೆ ನಡೆಸುವಂತೆ ಗುರುವಾರ ಸದನದಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದವು.
ವಿಧಾನಪರಿಷತ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ವೀರಣ್ಣ ಮತ್ತಿಕಟ್ಟಿ, ತತ್ವ-ಸಿದ್ದಾಂತಗಳನ್ನು ಗಾಳಿಗೆ ತೂರಿ ಆಡಳಿತ ಪಕ್ಷ ಇತರ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸಬೇಕೆಂದು ಆಗ್ರಹಿಸಿದರು.
ಈ ಮಾತಿಗೆ ಧ್ವನಿಗೂಡಿದ ಪ್ರತಿಪಕ್ಷಗಳ ಸದಸ್ಯರು ಸದನ ಸಮಿತಿಗೆ ಒತ್ತಾಯಿಸಿದರು. ಕೇಂದ್ರದಲ್ಲಿ ವಿಶ್ವಾಸಮತದ ವೇಳೆ ಅಡ್ಡ ಮತದಾನದ ಬಗ್ಗೆ ಸಭಾಧ್ಯಕ್ಷರು ತನಿಖೆಗೆ ಸಮಿತಿ ರಚಿಸಿದ್ದಾರೆ. ಇದೇ ರೀತಿ ರಾಜ್ಯದಲ್ಲಿಯೂ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕೆಂದು ಪ್ರತಿಪಕ್ಷದ ನಾಯಕರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಉಗ್ರಪ್ಪ, ಮೊದಲು ಎಲ್ಲಾ ಶಾಸಕರ ಆಸ್ತಿ ವಿವರದ ಬಗ್ಗೆ ತನಿಖೆಯಾಗಲಿ ಎಂದು ಪಟ್ಟು ಹಿಡಿದರು. ಆದರೆ ಕೊನೆಗೆ ಸಭಾಧ್ಯಕ್ಷರು ಸದನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರಿಂದ ಈ ತನಿಖೆ ಅಲ್ಲಿಗೆ ನಿಂತಿತು.
|