ರಾಜಧಾನಿಯಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಪೊಲೀಸರು ಬಂಧಿಸಿರುವ ಶಂಕಿತ ವ್ಯಕ್ತಿಗಳಿಬ್ಬರ ನ್ಯಾಯಾಂಗ ಬಂಧನದ ಅವಧಿಯನ್ನು ಆಗೋಸ್ಟ್ 14ರವರೆಗೆ ವಿಸ್ತರಿಸಲಾಗಿದೆ.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಇಲ್ಲಿನ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ನ್ಯಾಯಾಧೀಶ ಕೆ.ಬಿ. ಪಾಟೀಲ್ ಈ ಆದೇಶವನ್ನು ಹೊರಡಿಸಿದ್ದಾರೆ.
ಮುಂಬಯಿ ಮೂಲದ ಮುಕ್ತರ್‌ಖಾನ್ ಯಾನೆ ಮಕಬುಲ್ ಖಾನ್ ಹಾಗೂ ಸಚಿನ್ ಸುಖಾರಾಮ್ ಗಾಯಕವಾಡ್ ಎಂಬಿಬ್ಬರನ್ನು ಪೊಲೀಸರು ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಬಳಿಕ ಬಂಧಿಸಿದ್ದರು. ಈ ಮಧ್ಯೆ ಬಂಧಿತ ಮುಕ್ತರ್‌ಖಾನ್ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ನಿಷೇಧಿತ ಸಿಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಏಳು ಶಂಕಿತ ಉಗ್ರರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಕುಂದಾಪುರಕ್ಕೆ ತನಿಖಾ ತಂಡ:
ಬೆಂಗಳೂರಿನ ಸರಣಿ ಬಾಂಬ್ ಸ್ಫೋಟದ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿದೆ ಎಂಬ ಬಲವಾದ ಪುರಾವೆಯ ಹಿನ್ನೆಲೆಯಲ್ಲಿ ಕುಂದಾಪುರಕ್ಕೆ ಪೊಲೀಸರು ತೆರಳಿದ್ದು, ಕೆಲವೊಂದು ಸಂಘಟನೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
|