ಕಳೆದೆರಡು ದಿನಗಳಿಂದ ನಟ ರಜನಿಕಾಂತ್ ಅಭಿನಯದ ಕುಚೇಲನ್ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎದ್ದಿದ್ದ ವಿವಾದ ಬಗೆಹರಿದಿರುವ ಹಿನ್ನಲೆಯಲ್ಲಿ ಶುಕ್ರವಾರ ರಾಜ್ಯದಾದ್ಯಂತ ಯಾವುದೇ ಅಡ್ಡಿ ಆತಂಕವಿಲ್ಲದೆ ಬಿಡುಗಡೆಗೊಂಡಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 18 ಚಿತ್ರಮಂದಿರಗಳಲ್ಲಿ ಕುಚೇಲನ್ ಚಿತ್ರ ಬಿಡುಗಡೆಯಾಗಿದ್ದು, ಬೆಳಿಗ್ಗಿನಿಂದಲೇ ಟಿಕೇಟ್‌ಗಾಗಿ ಜನರು ಸಾಲುಗಟ್ಟಿ ನಿಂತಿದ್ದರು. ಉರ್ವಶಿ, ಪಿವಿಆರ್, ನಟರಾಜ್ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಪ್ರೇಕ್ಷಕರೂ ಚಿತ್ರ ಮಂದಿರಗಳ ಮುಂದೆ ಟಿಕೇಟ್‌ಗಾಗಿ ಸಾಲುಗಟ್ಟಿ ನಿಂತಿದ್ದರಿಂದ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು.
ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ನೀಡಿರುವ ಹೇಳಿಕೆ ಕುರಿತು ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕೆಂದು ಹಲವು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದವು.
ಅಲ್ಲದೆ, ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲವೆಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಳಿಕ ಗುರುವಾರದಂದು ಸಂಜೆಯ ವೇಳೆ ಖಾಸಗಿ ವಾಹಿನಿಯೊಂದರ ಮೂಲಕ ರಜನಿಕಾಂತ್ ಕ್ಷಮೆಯಾಚಿಸುವ ಮೂಲಕ ವಿವಾದ ಬಗೆಹರಿದಿತ್ತು.
|