ಕುಚೇಲನ್ ಚಿತ್ರದ ವಿವಾದ ತಣ್ಣಗಾಗಿ ಚಿತ್ರ ರಾಜ್ಯದೆಲ್ಲೆಡೆ ಬಿಡುಗಡೆಯಾಗಿದೆ. ಆದರೆ ಈಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು,ತಾವು ಕನ್ನಡಿಗರ ಕ್ಷಮೆ ಕೇಳಿಯೇ ಇಲ್ಲ ಎಂದು ರಜನಿಕಾಂತ್ ಹೇಳಿರುವುದು ಕನ್ನಡಪರ ಸಂಘಟನೆಗಳನ್ನು ಮತ್ತೊಮ್ಮೆ ರೊಚ್ಚಿಗೆಬ್ಬಿಸಿದೆ.
ಹೊಗೇನಕಲ್ ವಿವಾದ ಸಂದರ್ಭದಲ್ಲಿ ರಜನಿಕಾಂತ್ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಅವರ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದವು.
ಅದರಂತೆ ರಜನಿ ಗುರುವಾರ ಕನ್ನಡ ವಾಹಿನಿಯೊಂದಕ್ಕೆ ವಿಷಾದದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಕುಚೇಲನ್ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದವು.
ಆದರೆ ಶುಕ್ರವಾರ ಸಂಜೆ ವೇಳೆಗೆ ಇಂಗ್ಲಿಷ್ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ ರಜನಿಕಾಂತ್, ಕನ್ನಡಿಗರ ಕ್ಷಮೆ ಕೇಳಿಲ್ಲ. ಚಿತ್ರ ಬಿಡುಗಡೆಗೆ ಸಹಕರಿಸಿ ಎಂದಷ್ಟೇ ಕೋರಿದ್ದೇನೆ ಎಂದು ಹೇಳಿರುವುದು ಕನ್ನಡಪರ ಸಂಘಟನೆಗಳನ್ನು ಮತ್ತೆ ಕೆರಳಿಸಿದೆ.
ಇದು ಕನ್ನಡ ಚಳವಳಿಗಾರರನ್ನು ಬ್ಲ್ಯಾಕ್‌ಮೇಲ್ ಮಾಡುವ ತಂತ್ರ. ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ತೀವ್ರವಾದ ಕ್ರಮ ಕೈಗೊಳ್ಳಲಾಗುವುದು ಎಂದು ವಾಟಾಳ್ ತಿಳಿಸಿದ್ದಾರೆ.
ರಜನಿಕಾಂತ್ ಮರು ಹೇಳಿಕೆಯ ಬಗ್ಗೆ ಆಶ್ಚರ್ಯವಾಗುತ್ತಿದೆ. ಈ ಬಗ್ಗೆ ಸಭೆ ಕರೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
|