ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮಹತ್ವದ ಪಾತ್ರ ವಹಿಸುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಇತರ ಪಕ್ಷಗಳ ಬೆಂಬಲ ವಿಲ್ಲದೆ, ಗೆಲುವು ಸಾಧಿಸುವುದು ಅಸಾಧ್ಯವಾಗಿದೆ.
ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ನಿವೃತ್ತಿಯಿಂದ ತೆರವಾದ ಸಭಾಪತಿ ಸ್ಥಾನಕ್ಕೆ ಆ. 5ರಂದು ಚುನಾವಣೆ ನಡೆಯಲಿದ್ದು, ಚೆಂಡು ಜೆಡಿಎಸ್ ಮೈದಾನದಲ್ಲಿದೆ. ಹಂಗಾಮಿ ಸಭಾಪತಿಯಾಗಿರುವ ಎನ್. ತಿಪ್ಪಣ್ಣ ಅವರನ್ನು ಸಭಾಪತಿಯಾಗಿ ಮುಂದುವರಿಸಲು ಕಾಂಗ್ರೆಸ್‌ನ ವಿರೋಧವಿದೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ.ವಿ. ರಾಜಶೇಖರನ್ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ ಜೆಡಿಎಸ್ ಇದಕ್ಕೆ ಸಮ್ಮತಿಸು ತ್ತದೆಯೇ ಎಂದು ತಿಳಿಯಬೇಕಿದೆ. ಈ ಮಧ್ಯೆ ರಾಜ್ಯ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ಅವರು ನಾಳೆ ನಗರಕ್ಕೆ ಆಗಮಿಸಲಿದ್ದು, ಈ ಕುರಿತು ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇದೇ ವೇಳೆ ಜೆಡಿಎಸ್, ಬಿಜೆಪಿ ಜೊತೆ ಕೈಜೋಡಿಸುವುದು ಅಷ್ಟಕಷ್ಟೆ. ಇತ್ತೀಚೆಗಷ್ಟೇ ಮೈಸೂರಿನ 8 ಮಂದಿ ನಗರ ಪಾಲಿಕೆ ಸದಸ್ಯರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿ ಬಗ್ಗೆ ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
|