ರಾಜ್ಯದಲ್ಲಿ ವಿದ್ಯುತ್ ಅಭಾವ ತಪ್ಪಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಹೆಚ್ಚಿನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಕೇಂದ್ರಕ್ಕೆ ನಿಯೋಗವೊಂದು ಶೀಘ್ರದಲ್ಲಿಯೇ ತೆರಳಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಟ್ರಾ ಮೆಗಾ ಯೋಜನೆಯಡಿ ವಿದ್ಯುತ್ ಘಟಕ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರ ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಈ ಯೋಜನೆಯನ್ನು ರಾಜ್ಯಕ್ಕೂ ಅನ್ವಯಿಸುವಂತೆ ರೂಪಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಈ ಯೋಜನೆ ರಾಜ್ಯದಲ್ಲಿ ಜಾರಿಯಾದರೆ ರಾಜ್ಯದ ಬಹುತೇಕ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದೇ ಅಗಸ್ಟ್ 6ರಂದು ಕೆಪಿಟಿಸಿಎಲ್ ಸೇರಿದಂತೆ ಎಲ್ಲಾ ವಿದ್ಯುತ್ ಪ್ರಸರಣ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ನೀಡುವ ಅವಧಿಯನ್ನು ಆ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಅವರು ತಿಳಿಸಿದರು.
|