ಬೆಳಗಾವಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಶಾರ್ಜಾಕ್ಕೆ ತೆರಳಿದ್ದ ಶಂಕಿತ ಉಗ್ರನೊಬ್ಬನನ್ನು ಮುಂಬೈಯಲ್ಲಿ ಪೊಲೀಸರು ಬಂಧಿಸಿದ್ದು, ಆತನನ್ನು ಬೆಳಗಾವಿಗೆ ಕರೆತರಲಾಗಿದೆ.
ದುಬೈನಿಂದ ಬಂದಿದ್ದ ಬೆಳಗಾವಿಯ ಅಜಾದ್ ನಗರದ ಇಕ್ಬಾಲ್ ಶೌಕತ್ ಅಲಿ ಜಕಾತಿಯನ್ನು ಮುಂಬೈನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ತಿಳಿಸಿದ್ದಾರೆ.
ಅಲಿ ಬಂಧಿನದ ಮಾಹಿತಿ ಖಚಿತಪಡಿಸಿಕೊಂಡ ಬೆಳಗಾವಿಯ ಪೊಲೀಸರ ತಂಡವೊಂದು ಮುಂಬೈಗೆ ತೆರಳಿ, ಆತನನ್ನು ನಗರಕ್ಕೆ ಕರೆತಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಲ್ಲಿ ನಗರದಲ್ಲಿ ಬಂಧಿಸಲಾಗಿರುವ ಲಿಯಾಕತ್ ಸ್ನೇಹಿತನಾಗಿದ್ದ ಈತ, ಬೆಳಗಾವಿ ಬಿಟ್ಟು ಶಾರ್ಜಾಕ್ಕೆ ಪರಾರಿಯಾಗಿದ್ದ. ಶಾರ್ಜಾದಿಂದ ಮರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಬೆಳಗಾವಿ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಈತ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಾಗೂ ಸಿಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಈ ಮಧ್ಯೆ ಇತ್ತೀಚೆಗೆ ಬಂಧಿಸಲಾಗಿರುವ ಶಂಕಿತ ಉಗ್ರ ತನ್ವೀರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು 3 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
|