ರಾಜ್ಯ ವಿಧಾನಪರಿಷತ್‌ಗೆ ಮಂಗಳವಾರ ನಡೆಯಲಿರುವ ಸಭಾಪತಿ ಚುನಾವಣೆ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವೀರಣ್ಣ ಮತ್ತಿಕಟ್ಟೆ ಹಾಗೂ ಬಿಜೆಪಿಯಿಂದ ಶಶೀಲ್ ನಮೋಶಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ವರಿಷ್ಠರ ಸಭೆಯಲ್ಲಿ ಎಐಸಿಸಿ ವರಿಷ್ಠರ ಆದೇಶಕ್ಕೆ ಅನುಗುಣವಾಗಿ, ನಾಳೆ ನಡೆಯಲಿರುವ ವಿಧಾನಪರಿಷತ್ ಸಭಾಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ವೀರಣ್ಣ ಮತ್ತಿಕಟ್ಟೆಯವರನ್ನು ಆಯ್ಕೆ ಮಾಡಿರವುದಾಗಿ ತಿಳಿಸಿತ್ತು. ಬಳಿಕ ಮತ್ತಿಕಟ್ಟೆ ಅವರು ನಾಮಪತ್ರ ಸಲ್ಲಿಸಿದ್ದರು.
ಇದೀಗ ಆಡಳಿತರೂಢ ಭಾರತೀಯ ಜನತಾಪಕ್ಷ ಕೂಡ ಶಶೀಲ್ ನಮೋಶಿಯನ್ನು ಅಖಾಡಕ್ಕೆ ಇಳಿಸುವ ಮೂಲಕ ರಾಜ್ಯರಾಜಕಾರಣದಲ್ಲಿ ಮತ್ತೆ ರಂಗೇರಿದೆ.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ 29, ಜೆಡಿಎಸ್‌ನ 13 ,ಬಿಜೆಪಿ 23 ಹಾಗೂ ಪಕ್ಷೇತರ 3, ಜೆಡಿಯುನ 2 ಸದಸ್ಯರು ಇದ್ದು, ಬಿಜೆಪಿಗೆ ಗೆಲುವು ಕಷ್ಟಸಾಧ್ಯ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಏತನ್ಮಧ್ಯೆ 75 ಮಂದಿ ಸದಸ್ಯ ಬಲ ಹೊಂದಿರುವ ವಿಧಾನಪರಿಷತ್‌ನ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಷೋಷಿಸಿದೆ, ಆದರೆ ರಾಜ್ಯರಾಜಕಾರಣದಲ್ಲಿ ಕೊನೆಯ ಕ್ಷಣದಲ್ಲಿ ಆಗುವ ಬದಲಾವಣೆ ಮಹತ್ವದ್ದಾಗಿರುವುದರಿಂದ ಸಭಾಪತಿ ಚುನಾವಣೆ ಕುರಿತು ನಿಖರವಾಗಿ ಭವಿಷ್ಯ ನುಡಿಯುವುದು ಕಷ್ಟಸಾಧ್ಯ.
ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
|