ಭಾನುವಾರ ಮುಂಬೈನಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದ್ದ ಶಂಕಿತ ಸಿಮಿ ಉಗ್ರ ಇಕ್ಬಾಲ್ ಶೌಕತ್ ಅಲಿ ಜಕಾತಿಯನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 8ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ. ಈತನ ವಿಚಾರಣೆ ನಡೆಸಿರುವ ಬೆಳಗಾವಿ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಅನೇಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸಿದ್ದನು. ಅಂತೆಯೇ ಬೆಳಗಾವಿಯಲ್ಲಿ ಅನೇಕ ಯುವಕರನ್ನು ಸಿಮಿ ಸಂಘಟನೆಗೆ ಸೇರಿಕೊಳ್ಳುವಂತೆ ಒತ್ತಾಯ ಪಡಿಸುತ್ತಿದ್ದನು ಎಂಬ ಅಂಶ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ತತ್ತರ:
ಕಳೆದ ಮೂರು ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಏಳು ಜನ ಶಂಕಿತ ಉಗ್ರರು ಪೊಲೀಸರ ಅತಿಥಿಯಾಗಿದ್ದಾರೆ. ಅಲ್ಲದೆ, ಇದುವರೆಗೆ ಬಂಧಿತರಾಗಿರುವ ಶಂಕಿತ ಉಗ್ರರನ್ನು ಹೆಚ್ಚಿನವರು ಉತ್ತರ ಕನ್ನಡದವರಾಗಿದ್ದಾರೆ. ಇದರಿಂದ ಭಯಗೊಂಡಿರುವ ಜನತೆ ಭಯೋತ್ಪಾದಕರ ತಾಣವಾಗುತ್ತದೆ ಎಂದು ಆತಂಕಗೊಂಡಿದ್ದಾರೆ.
|