ಮುಂಬೈನಿಂದ ನಗರಕ್ಕೆ ಕಾರಿನಲ್ಲಿ ತರಲಾಗಿರುವ ಅಪಾರ ಪ್ರಮಾಣದ ಹಣವನ್ನು ಐ.ಟಿ., ವಾಣಿಜ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಇದು ಹವಾಲ ಹಣವೆಂದು ಶಂಕಿಸಲಾಗಿದೆ.
ಜೆ.ಸಿ.ನಗರದಲ್ಲಿ ವಶಪಡಿಸಿಕೊಂಡಿರುವ ಟೊಯೋಟಾ ಇನ್ನೊವಾ ಕಾರಿನಲ್ಲಿ 9.5ಕೋಟಿ ರೂ.ಗಳ ಹಣವಿದ್ದು, ಇದು ಹವಾಲ ಹಣವೆಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಈ ಕಾರು ಬೆನ್ಸನ್‌ಟೌನ್ ಸೈಯದ್ ಜಮೀರ್ ನಿಶಾನ್ ಎಂಬುವವರಿಗೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಇಷ್ಟು ಮೊತ್ತದ ಹಣದ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ನಿಶಾನ್, ಮುಂಬೈನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ಈ ಹಣ ತಂದಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಸರಿಯಾದ ವಿವರ ಕಲೆ ಹಾಕುತ್ತಿರುವ ಪೊಲೀಸರು ವಾಣಿಜ್ಯ ಇಲಾಖೆ ಅಧಿಕಾರಿಗಳ ನೆರವು ಪಡೆದಿರುವುದಾಗಿ ಹೇಳಿದ್ದಾರೆ.
ಸೈಯದ್ ನಿಶಾನ್ ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹಣದ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳ ನೆರವನ್ನೂ ಪೊಲೀಸರು ಪಡೆದುಕೊಂಡಿದ್ದಾರೆ.
|